ಮಧ್ಯ ಪ್ರದೇಶ: ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದ ಅದೇ ಜಾಗಕ್ಕೇ ತೆರಳಿ ವೈದ್ಯಕೀಯ ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ!

ತಮ್ಮ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದ ಅದೇ ಜಾಗಕ್ಕೇ ತೆರಳಿರುವ ಮಧ್ಯ ಪ್ರದೇಶ ಆರೋಗ್ಯ ಸಿಬ್ಬಂದಿ ವೈದ್ಯಕೀಯ ತಪಾಸಣೆ ಮುಂದುವರೆಸುವ ಮೂಲಕ ಕರ್ತವ್ಯ ಪಾಲನೆ ಮುಂದುವರೆಸಿದ್ದಾರೆ.
ವೈದ್ಯಕೀಯ ಸಿಬ್ಬಂದಿ
ವೈದ್ಯಕೀಯ ಸಿಬ್ಬಂದಿ

ಇಂದೋರ್: ತಮ್ಮ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ್ದ ಅದೇ ಜಾಗಕ್ಕೇ ತೆರಳಿರುವ ಮಧ್ಯ ಪ್ರದೇಶ ಆರೋಗ್ಯ ಸಿಬ್ಬಂದಿ ವೈದ್ಯಕೀಯ ತಪಾಸಣೆ ಮುಂದುವರೆಸುವ ಮೂಲಕ ಕರ್ತವ್ಯ ಪಾಲನೆ ಮುಂದುವರೆಸಿದ್ದಾರೆ.

ಹೌದು.. ನಿನ್ನೆ ಕೊರೊನಾ ವೈರಸ್‌ ಸೋಂಕು ಆತಂಕ ವ್ಯಾಪಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸೇವೆಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಇಂದೋರ್ ನ ಟಾಟಪಟ್ಟಿ ಬಖಾಲ್‌ನಲ್ಲಿ ಸ್ಥಳೀಯರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದರು, ಈ ವೇಳೆ ಆಕ್ರೋಶ ಜನ  ಅವರ ಮೇಲೆ ಹಲ್ಲೆ ಮಾಡಿ ಕಲ್ಲು ತೂರಾಟ ಮಾಡಿದ್ದರು. ಪ್ರಾಣ ಉಳಿಸಿಕೊಳ್ಳಲು ವೈದ್ಯರು ಅಲ್ಲಿಂದ ಓಡಿ ಬಂದಿದ್ದರು. ಇದೀಗ ಮತ್ತದೇ ಸ್ಥಳಕ್ಕೆ ತೆರಳಿರುವ ವೈದ್ಯಕೀಯ ಸಿಬ್ಬಂದಿ ತಪಾಸಣೆ ಕಾರ್ಯ ಮುಂದುವರೆಸಿದ್ದಾರೆ.

ಈ ಕುರಿತಂತೆ ನಿನ್ನೆಯ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿದ್ದ ವೈದ್ಯೆ ಡಾ.ಝಕೀಯಾ ಸೈಯೆದ್ ಅವರು ಮಾತನಾಡಿದ್ದು, ನಿನ್ನೆ ನಡೆದ ಹಲ್ಲೆಯಿಂದಾಗಿ ನಮಗೆ ಗಾಯಗಳಾಗಿವೆ. ಆದರೆ ದೇಶ ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ನಾವು ನಮ್ಮ ಕರ್ತವ್ಯ ಮುಂದುವರೆಸಲೇಬೇಕಿದೆ.  ಎಂತಹುದೇ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುವ ಧೈರ್ಯ ನಮಗಿದೆ. ನಮ್ಮ ಕೆಲಸ ಮಾಡಲು ನಮಗೆ ಯಾವುದೇ ರೀತಿಯ ಭಯವಿಲ್ಲ ಎಂದು ಹೇಳಿದ್ದಾರೆ.

ಏನಿದು ಘಟನೆ?
ಮಧ್ಯಪ್ರದೇಶದ ಇಂದೋರ್‌ ನ ಟಾಟಪಟ್ಟಿ ಬಖಾಲ್‌ನಲ್ಲಿ ಬುಧವಾರ ಮೂವರು ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆಯ ಐವರ ತಂಡ ನಿರ್ದಿಷ್ಟ ವ್ಯಕ್ತಿಯ ಪರೀಕ್ಷೆಗಾಗಿ ಸ್ಥಳಕ್ಕೆ ತೆರಳಿತ್ತು. ಇಲ್ಲಿನ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವ ಕುರಿತು ವರದಿಯಾದ ಹಿನ್ನೆಲೆಯಲ್ಲಿ ಪರೀಕ್ಷೆ  ನಡೆಸಲು ವೈದ್ಯರು ವ್ಯಕ್ತಿಯ ಹುಡುಕಾಟದಲ್ಲಿದ್ದರು. ಆದರೆ, ಆ ವ್ಯಕ್ತಿಯ ಕುರಿತು ವಿಚಾರಿಸುತ್ತಿದ್ದಂತೆಯೇ ಆಕ್ರೋಶಗೊಂಡ ಇಲ್ಲಿನ ಸ್ಥಳೀಯರು ಕಲ್ಲು ತೂರಾಟ ನಡೆಸಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದರು.

ವೈದ್ಯರ ಮೇಲಿನ  ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಇಲ್ಲಿನ ಸ್ಥಳೀಯರ ಕಾರ್ಯಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು.  ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಛಾತ್ರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ  ವೈರಸ್‌ ಸೊಂಕಿನ ಕುರಿತು ಸರಿಯಾದ ಮಾಹಿತಿ ಇಲ್ಲದ್ದು ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಹರಡಿರುವ ಊಹಾಪೋಹಗಳಿಂದ ಇಂಥ ಘಟನೆ ನಡೆದಿದೆ ಎಂದು ತನಿಖಾಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com