ವೈದ್ಯರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಗಂಭೀರ ಅಪರಾಧ: ಡಾ. ಹರ್ಷವರ್ಧನ್

 ಕೋವಿಡ್ 19 ವಿರುದ್ಧದ ಸಮರದಲ್ಲಿ ಸೇನಾನಿಗಳಾಗಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮತ್ತು ದಾಳಿ ನಡೆಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಧೋರಣೆಯನ್ನು ಸಹಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. 
ಡಾ ಹರ್ಷವರ್ಧನ್
ಡಾ ಹರ್ಷವರ್ಧನ್

ನವದೆಹಲಿ: ಕೋವಿಡ್ 19 ವಿರುದ್ಧದ ಸಮರದಲ್ಲಿ ಸೇನಾನಿಗಳಾಗಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮತ್ತು ದಾಳಿ ನಡೆಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಧೋರಣೆಯನ್ನು ಸಹಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗಲು ಮತ್ತು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವವರನ್ನು ದೇಶದ ಜನತೆ ಗೌರವಿಸಬೇಕು. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತಿತರರ ಮೇಲೆ ಹಲ್ಲೆ ಮತ್ತು ದಾಳಿ ನಡೆಸುವುದು ಗಂಭೀರ ಅಪರಾಧವಾಗಲಿದೆ. ಕೋವಿಡ್ 19 ಸೋಂಕು ನಿಯಂತ್ರಣದಲ್ಲಿ ತೊಡಗಿರುವವರನ್ನು ದೇಶದ ಜನತೆ ಗೌರವಿಸಬೇಕು ಎಂದು ಹೇಳಿದರು.

ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ದೇಶದಲ್ಲಿ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಔಷಧಗಳ ಕೊರತೆಯಿಲ್ಲ. ಬರುವ ದಿನಗಳಲ್ಲಿ ಎನ್ 95 ಮಾಸ್ಕ್ ಗಳು, ವೆಂಟಿಲೇಟರ್ ಗಳು, ಮತ್ತಿತರ ವೈದ್ಯಕೀಯ ಪರಿಕರಗಳನ್ನು ರಾಜ್ಯ ಸರ್ಕಾರಗಳಿಗೆ ಅಗತ್ಯ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುವುದು ಎಂದರು.

ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರ್ಸಿಂಗ್ ಹೋಮ್ ಗಳನ್ನು ಕೊರೋನಾ ವಿಶೇಷ ವಾರ್ಡ್ ಗಳಾಗಿ ಪರಿವರ್ತಿಸಲಾಗಿದೆ. ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಹೊರ ರೋಗಿಗಳ ವಿಭಾಗವನ್ನು ಮುಚ್ಚಲಾಗಿದೆ. ರಾಜ್ಯಗಳಿಗೆ ಟೆಲಿಮೆಡಿಸನ್ ಸೌಲಭ್ಯ ಅಗತ್ಯವಿದ್ದರೆ ನೀಡಲಾಗುವುದು ಎಂದರು.

ಕೋವಿಡ್ 19 ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗೆ ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಲಾಗಿದೆ. ಸೋಂಕಿನ ಶಂಕೆ ಹೊಂದಿರುವವರು ಹೊಟೆಲ್ ಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಗುಣಮಟ್ಟದ ಚಿಕಿತ್ಸೆ ನೀಡಿ ಸೋಂಕು ದೃಢಪಟ್ಟಿರುವವರನ್ನು ಗುಣಮುಖರನ್ನಾಗಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com