ಆಂಧ್ರದ ಉಪ್ಪುತೆರು ಹೊಳೆಯಲ್ಲಿ ಮುಳುಗಿ ಆರು ಮೀನುಗಾರರು ಸಾವು, ಐದು ಮೃತದೇಹಗಳ ಪತ್ತೆ

ಆಂಧ್ರಪ್ರದೇಶ ಕೃಷ್ಣ ಜಿಲ್ಲೆಯ ಕೃತಿವೆನ್ನು ಮಂಡಲದ ವರ್ಲಗೊಂಡಿತಿಪ್ಪ ಗ್ರಾಮ ಸಮೀಪದ ಉಪ್ಪುತೆರು ಹೊಳೆಯಲ್ಲಿ ಮುಳುಗಿ ಆರು ಮೀನುಗಾರರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ

ವಿಜಯವಾಡ: ಆಂಧ್ರಪ್ರದೇಶ ಕೃಷ್ಣ ಜಿಲ್ಲೆಯ ಕೃತಿವೆನ್ನು ಮಂಡಲದ ವರ್ಲಗೊಂಡಿತಿಪ್ಪ ಗ್ರಾಮ ಸಮೀಪದ ಉಪ್ಪುತೆರು ಹೊಳೆಯಲ್ಲಿ ಮುಳುಗಿ ಆರು ಮೀನುಗಾರರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಈವರೆಗೆ ಐದು ಮೃತದೇಹಗಳನ್ನು ಹೊಳೆಯಿಂದ ಹೊರತೆಗೆಯಲಾಗಿದ್ದು, ಆರನೇ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮೂರು ನಾಡ ದೋಣಿಗಳಲ್ಲಿ ಮೀನು ಹಿಡಿಯಲು ವರ್ಲಗೊಂಡಿತಿಪ್ಪ ಮತ್ತು ಪಲ್ಲೆಪಾಲೆಂಗೆ ಸೇರಿದ 19 ಮೀನುಗಾರರು ಉಪ್ಪುತೆರು ಹೊಳೆಗೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಇವರೆಲ್ಲ ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ರಭಸದ ಗಾಳಿ ಈ ಪ್ರದೇಶಕ್ಕೆ ಬೀಸಿದ್ದು, ಇದರ ಪರಿಣಾಮವಾಗಿ ಹೊಳೆಯಲ್ಲಿ ದೋಣಿಯೊಂದು ಮುಳುಗಿದೆ.

ಆರು ಮೀನುಗಾರರು ಹೊಳೆಯಲ್ಲಿ ಮುಳುಗಿದರೆ, 13 ಮಂದಿ ಸುರಕ್ಷಿತವಾಗಿ ತೀರಕ್ಕೆ ಈಜಿ ಪಾರಾಗಿದ್ದಾರೆ. ಹೊಳೆಯಿಂದ ಐದು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಮೃತರನ್ನು ಬಾಲಗಂ ನರಸಿಂಹ ಮೂರ್ತಿ (60), ವನಮಾಲ ವೆಂಕಟೇಶ್ವರ ರಾವ್ (59), ಮೋಕಾ ನಾಗೇಶ್ವರ ರಾವ್ (60), ಜಲ್ಲಾ ಪೆದ್ದಿ ರಾಜು (55), ಜಲ್ಲಾ ವೆಂಕಟೇಶ್ವರ ರಾವ್ (50) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ದೇವಿಡು ವೆಂಕಟೇಶ್ವರ ರಾವ್ (25)ಗಾಗಿ ಶೋಧ ನಡೆಯುತ್ತಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೆರ್ನಿ ವೆಂಕಟರಮಯ್ಯ, ಶಾಸಕ ಜೋಗಿ ರಮೇಶ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಸ್.ಎಲ್.ಲಾಲ್ ಮೊಹಮ್ಮದ್ ಮತ್ತು ಕೃಷ್ಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರನಾಥ ಬಾಬು ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ವೈಎಸ್ಆರ್ ಮತ್ಸ್ಯಕರ ಭರೋಸಾ ಯೋಜನೆಯಡಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸಚಿವರು ಪ್ರಕಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com