ಕೋವಿಡ್-19: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ 15 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ಬಿಡುಗಡೆ!

ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 15 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 15 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಿದೆ.

ಈ ಕುರಿತಂತೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರ್ವಾಲ್‌ ಮಾಹಿತಿ ನೀಡಿದ್ದು, ಒಟ್ಟು ಐದು ವರ್ಷಗಳ ಅವಧಿಯ ಈ ಪ್ಯಾಕೇಜ್‌ನ್ನು ಮೂರು ಹಂತಗಳಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ದೇಶಾದ್ಯಂತ ಏಕ  ಕಾಲದಲ್ಲಿ ಈ ಹಣವನ್ನು ಬಳಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಮೂರು ಹಂತಗಳಲ್ಲಿ ನೀಡಲು ಮುಂದಾಗಿದ್ದು, ಜನವರಿ 2020 ರಿಂದ ಜೂನ್ 2020 ಮೊದಲ ಹಂತ, ಜುಲೈ 2020 ರಿಂದ ಮಾರ್ಚ್ 2021 2ನೇ ಹಂತ  ಮತ್ತು ಏಪ್ರಿಲ್-2021 ರಿಂದ ಮಾರ್ಚ್ 2024 ಮೂರನೇ ಹಂತ.. ಹೀಗೆ ಒಟ್ಟು ಮೂರು ಹಂತಗಳಲ್ಲಿ ಈ ವಿಶೇಷ ಪ್ಯಾಕೇಜ್‌ನ್ನು ವಿನಿಯೋಗಿಸಲಾಗುತ್ತದೆ. ಅಲ್ಲದೆ ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ಎಲ್ಲ ರಾಜ್ಯಗಳಿಗೆ ಈ ಹಣವನ್ನು ಸಮಾನವಾಗಿ ಹಂಚಲಾಗುವುದು ಎಂದು  ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಮೊದಲನೇ ಹಂತದಲ್ಲಿ ಕೋವಿಡ್-19 ವೈರಸ್ ನಿರ್ವಹಣೆಗಾಗಿಯೇ ದೇಶದಲ್ಲಿ ವಿಶೇಷ ಆಸ್ಪತ್ರೆಗಳ ನಿರ್ಮಾಣ ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳ ಶೇಖರಣೆಗೆ, ಐಸಿಯೂ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಅಂದರೆ ಈಗಾಗಲೇ ಮೊದಲನೇ ಹಂತ ಜಾರಿಯಲ್ಲಿದ್ದು, ಇದಕ್ಕೆ  ಬೇಕಾದ ಹಣಕಾಸಿನ ನೆರವನ್ನು ಶೀಘ್ರದಲ್ಲೇ ಒದಗಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ಹಂತದಲ್ಲಿ ಆಸ್ಪತ್ರೆಗಳ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಆ್ಯಂಬುಲೆನ್ಸ್ ಗಳ ಸೋಂಕು ತೊಳೆಯುವಿಕೆ  (disinfection of hospitals)ಕೂಡ ಸೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

1.7 ಕೋಟಿ ಪಿಪಿಇ ಕಿಟ್ ಗಳು, ಎನ್ 95 ಮಾಸ್ಕ್ ಗಳ ತಯಾರಿಕೆ
ಇನ್ನು ಕೊರೋನಾ ವೈರಸ್ ನಿರ್ವಹಣೆ ಸಂಬಂಧ ವೈದ್ಯರಿಗೆ ಅಗತ್ಯವಿರುವ ಪಿಪಿಇ ಕಿಟ್ ಗಳು ಮತ್ತು ಎನ್ 95 ಮಾಸ್ಕ್ ಗಳನ್ನು ದೇಶೀಯವಾಗಿಯೇ ತಯಾರಿಸಲು ಇದೇ ವೇಳೆ ಸರ್ಕಾರ ಕ್ರಮ ಕೈಗೊಂಡಿದೆ. ಸುಮಾರು 1.7 ಕೋಟಿ ಪಿಪಿಇ ಕಿಟ್ ಗಳ ತಯಾರಿಕೆಗೆ ಸರ್ಕಾರ ಕ್ರಮ  ಕೈಗೊಂಡಿದ್ದು, ಇದಲ್ಲದೇ ಎನ್ 95 ಮಾಸ್ಕ್ ಗಳ ತಯಾರಿಕೆ ಸಂಬಂಧ ಕೇಂದ್ರ ಸರ್ಕಾರ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು 49 ಸಾವಿರ ವೆಂಟಿಲೇಟರ್ ಗಳ ತಯಾರಿಕೆಗಾಗಿ ಕೇಂದ್ರ ಸರ್ಕಾರ ದೇಶದ ಸುಮಾರು 20 ಸಂಸ್ಥೆಗಳೊಂದಿಗೆ ಒಪ್ಪಂದ  ಮಾಡಿಕೊಂಡಿದೆ. 

ಆರೋಗ್ಯ ವ್ಯವಸ್ಥೆಯ ಬಲವರ್ಧನೆಗೆ ಕೇಂದ್ರದಿಂದ ಕ್ರಮ
ದೇಶದ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ಘೋಷಿಸಿದ್ದು, ಸೋಂಕು ನಿರ್ವಹಣೆಗಾಗಿ ರಾಜ್ಯ ಆರೋಗ್ಯ ವ್ಯವಸ್ಥೆಗಳ ಬಲವರ್ಧನೆ, ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ಸಂಗ್ರಹಣೆ ಮತ್ತು ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ಜೈವಿಕ ಭದ್ರತಾ ಸಿದ್ಧತೆ ಸೇರಿದಂತೆ ಕಣ್ಗಾವಲು ಚಟುವಟಿಕೆಗಳನ್ನು ಬಲಪಡಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com