ಕೊರೋನಾ ವೈರಸ್: 24 ಗಂಟೆಗಳಲ್ಲಿ 35 ಸಾವು, 308ಕ್ಕೇರಿದ ಸಾವಿನ ಸಂಖ್ಯೆ, 9,152 ಪಾಸಿಟಿವ್ ಪ್ರಕರಣ ದಾಖಲು!

ಕಳೆದ 24 ಗಂಟೆಗಳಲ್ಲಿ ಮಾರಕ ಕೊರೋನಾ ವೈರಸ್ ಗೆ ದೇಶದಲ್ಲಿ ಮತ್ತೆ 35 ಸಾವು ಸಂಭವಿಸಿದ್ದು, ಆ ಮೂಲಕ ದೇಶದಲ್ಲಿ ಕೋವಿಡ್-19ಗೆ ಸಾವನ್ನಪ್ಪಿದವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಾರಕ ಕೊರೋನಾ ವೈರಸ್ ಗೆ ದೇಶದಲ್ಲಿ ಮತ್ತೆ 35 ಸಾವು ಸಂಭವಿಸಿದ್ದು, ಆ ಮೂಲಕ ದೇಶದಲ್ಲಿ ಕೋವಿಡ್-19ಗೆ ಸಾವನ್ನಪ್ಪಿದವರ ಸಂಖ್ಯೆ 308ಕ್ಕೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಮತ್ತೆ 85 ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ದೆಹಲಿಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,154ಕ್ಕೆ ಏರಿಕೆಯಾಗಿದೆ. ಅಂತೆಯೇ ದೆಹಲಿಯಲ್ಲಿ 10 ಹೊಸ ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು. ದೆಹಲಿಯಲ್ಲಿ  ಒಟ್ಟಾರೆ ಹಾಟ್ ಸ್ಪಾಟ್ ಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಅಂತೆಯೇ ದೆಹಲಿಯಲ್ಲಿ ಐದು ಸೋಂಕಿತರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. 

ಕರ್ನಾಟಕದಲ್ಲಿ 11 ಹೊಸ ಪಾಸಿಟಿವ್ ಪ್ರಕರಣ ದೃಢ: ಸೋಂಕಿತರ ಸಂಖ್ಯೆ 226ಕ್ಕೆ 
ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ ಮತ್ತೆ 11 ಹೊಸ ಪಾಸಿಟಿವ್ ಪ್ರಕರಣ ದೃಢವಾಗಿದ್ದು, ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ  ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈಗಾಗಲೇ ಒಂದು ಪ್ರಕರಣ ವರದಿಯಾಗಿರುವ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಆ ರೋಗಿಯು  ರೋಗಿ ನಂ. 128 ಜೊತೆ ಸಂಪರ್ಕ‌ ಹೊಂದಿದ್ದರು ಎಂದು ತಿಳಿದುಬಂದಿದೆ.  ಉಳಿದವರು ರಾಯಬಾಗದವರು.  ಇವರು ಕೂಡ ರೋಗಿಗಳ ಸಂಪರ್ಕಕ್ಕೆ ಬಂದಿದ್ದವರೇ ಆಗಿದ್ದಾರೆ. ಎಲ್ಲರಿಗೂ  ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು 19, 38, 55 ಹಾಗೂ 25 ವರ್ಷ ವಯಸ್ಸಿನವರಾಗಿದ್ದಾರೆ.

ಮೈಸೂರಿನಲ್ಲಿ ಒಬ್ಬರಿಗೆ ಕೊರೋನಾ ವೈರಸ್ ಕಲಬುರಗಿ ವೃದ್ಧನ ಸೊಸೆ, ಆಯಾಗೆ ಸೋಂಕು
ಇನ್ನು ಜಿಲ್ಲೆಯಲ್ಲಿ ಭಾನುವಾರ ಒಬ್ಬರಲ್ಲಿ ಕೋವಿಡ್-19 ಪತ್ತೆಯಾಗಿದೆ. 32 ವರ್ಷ ವಯಸ್ಸಿನ ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸೋಂಕಿತ ನೌಕರರ ಸಂಪರ್ಕಕ್ಕೆ ಬಂದಿದ್ದರು. ಸೋಂಕು ಪೀಡಿತರ ಸಂಖ್ಯೆ ಮೈಸೂರಿನಲ್ಲಿ 49 ಕ್ಕೆ ಏರಿದೆ. ಅಂತೆಯೇ ಕಲಬುರಗಿಯಲ್ಲಿ  ಕೊರೋನಾ ಸೋಂಕಿನಿಂಧ ಮೃತಪಟ್ಟ 70 ವರ್ಷದ ವೃದ್ಧನ ಸೊಸೆ ಮತ್ತು ಆಯಾಗೆ ಕೂಡ ಸೋಂಕು ದೃಢಪಟ್ಟಿದೆ. ಕಲಬುರಗಿಯ ವೃದ್ಧನ 24 ವರ್ಷದ ಸೊಸೆ ಮತ್ತು ಆತನೊಂದಿಗೆ ಸಂಪರ್ಕ ಹೊಂದಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1982ಕ್ಕೆ ಏರಿಕೆಯಾಗಿದ್ದು, ನಿನ್ನೆ ಬಿಎಂಸಿ ವ್ಯಾಪ್ತಿಯ ಲಾಲ್ ಭಾಗ್ ಪ್ರದೇಶದಲ್ಲಿರುವ ಗಣೇಶ್ ಗಲ್ಲಿಯಲ್ಲಿ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಕಂಟೈನ್ ಮೆಂಟ್ ಪ್ರದೇಶ (ಸೋಂಕು ಪೀಡಿತ ಪ್ರದೇಶ) ಎಂದು ಘೋಷಣೆ  ಮಾಡಿ ಸೀಲ್ ಡೌನ್ ಮಾಡಲಾಗಿದೆ.

ಇತ್ತ ತಮಿಳುನಾಡಿನಲ್ಲೂ ಸೋಂಕಿತರ ಸಂಖ್ಯೆ 1,075ಕ್ಕೆ ಏರಿಕೆಯಾಗಿದ್ದು, ಮದುರೈ ಜಿಲ್ಲೆಯ ತಬಾಲ್ ತಂತಿನಗರ ಪ್ರದೇಶದಲ್ಲಿ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಈ ಪ್ರದೇಶವನ್ನೂ ಕೂಡ ಕಂಟೈನ್ ಮೆಂಟ್ ಪ್ರದೇಶ (ಸೋಂಕು ಪೀಡಿತ ಪ್ರದೇಶ) ಎಂದು  ಘೋಷಣೆ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ ಎಲ್ಲ ರೀತಿಯ ಜನಸಂಚಾರವನ್ನು ನಿರ್ಬಂಧಿಸಲಾಗಿದೆ. 

ಉಳಿದಂತೆ ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 804ಕ್ಕೆ, ಮಧ್ಯ ಪ್ರದೇಶದಲ್ಲಿ 532ಕ್ಕೆ ಮತ್ತು ಗುಜರಾತ್ ನಲ್ಲಿ 516ಕ್ಕೆ ಏರಿಕೆಯಾಗಿದೆ.

ರಾಜ್ಯಾವಾರು ಸೋಂಕಿತರ ಮಾಹಿತಿಗಾಗಿ ಈ ಕೆಳಕಂಡ ಮ್ಯಾಪ್ ಗಮನಿಸಬಹುದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com