ಆಂಧ್ರ ಪ್ರದೇಶ: ಲಾಕ್ ಡೌನ್ ಮಧ್ಯೆ ಪ್ರತಿದಿನ 30 ಕಿ.ಮೀ ಪ್ರಯಾಣಿಸಿ ಆರೋಗ್ಯ ಸೇವೆ ನೀಡುವ ತುಂಬುಗರ್ಭಿಣಿ ವೈದ್ಯೆ!

ಆಕೆ 8 ತಿಂಗಳ ತುಂಬು ಗರ್ಭಿಣಿ, ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ ಸುಮಾರು 30 ಕಿಲೋ ಮೀಟರ್ ಪ್ರಯಾಣಿಸಿ ವಿಜಯನಗರಂ ಜಿಲ್ಲೆಯಲ್ಲಿರುವ ದೇವುಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಾರೆ. ಇವರೇ 33 ವರ್ಷದ ಡಾ ಎಸ್ ಜಾನ್ಸಿ.
ದೇವುಪಳ್ಳಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ತಪಾಸಣೆ ಮಾಡುತ್ತಿರುವ ವೈದ್ಯೆ ಡಾ ಜಾನ್ಸಿ
ದೇವುಪಳ್ಳಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ತಪಾಸಣೆ ಮಾಡುತ್ತಿರುವ ವೈದ್ಯೆ ಡಾ ಜಾನ್ಸಿ

ವಿಜಯನಗರಂ(ಆಂಧ್ರ ಪ್ರದೇಶ): ಆಕೆ 8 ತಿಂಗಳ ತುಂಬು ಗರ್ಭಿಣಿ, ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ ಸುಮಾರು 30 ಕಿಲೋ ಮೀಟರ್ ಪ್ರಯಾಣಿಸಿ ವಿಜಯನಗರಂ ಜಿಲ್ಲೆಯಲ್ಲಿರುವ ದೇವುಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಾರೆ. ಇವರೇ 33 ವರ್ಷದ ಡಾ ಎಸ್ ಜಾನ್ಸಿ.

ದೇವುಪಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಖಾಸಗಿ ಕ್ಲಿನಿಕ್ ಗಳು ಇಲ್ಲದಿರುವುದರಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಜನ ನಂಬಿಕೊಂಡು ಇದ್ದಾರೆ. ನಾನು ಕಳೆದ ಒಂದೂವರೆ ವರ್ಷದಿಂದ ಈ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಇಲ್ಲಿನ ಗ್ರಾಮಸ್ಥರು ಆರೋಗ್ಯ ಸೇವೆಗೆ ನಮ್ಮನ್ನೇ ನಂಬಿಕೊಂಡು ಇದ್ದಾರೆ, ಈ ಕೊರೋನಾ ಸೋಂಕು ಮತ್ತು ಲಾಕ್ ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದೇನೆ ಎಂದು ಡಾ ಜಾನ್ಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಇಲ್ಲಿಗೆ ಹೋಗಲು ಸಂಚಾರ ಸಾರಿಗೆ ಸಮಸ್ಯೆಯಿದೆ. ಆದರೂ ಡಾ ಜಾನ್ಸಿ ಬುಡಕಟ್ಟು ಗ್ರಾಮಗಳ ಮನೆಮನೆಗೆ ಹೋಗಿ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ವಿದೇಶಗಳಿಂದ ಬಂದವರು ಕೂಡ ಇದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೋನಾ ಸೋಂಕು ಲಕ್ಷಣ ಹೊಂದಿರುವ 10 ರೋಗಿಗಳಿಗೆ ಡಾ ಜಾನ್ಸಿ ಚಿಕಿತ್ಸೆ ನೀಡಿದ್ದಾರೆ.

ತಾವು ಗರ್ಭಿಣಿಯಾಗಿರುವಾಗ ಹೀಗೆ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಅದೂ ಕೊರೋನಾ ಶಂಕಿತರನ್ನು ಪರೀಕ್ಷೆ ಮಾಡುವುದು ಅಪಾಯವೆನಿಸುವುದಿಲ್ಲವೇ ಎಂದು ಕೇಳಿದಾಗ, ಸರ್ಕಾರ ನೀಡಿರುವ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಬಳಸುತ್ತೇನೆ. ಅಷ್ಟೇ ಅಲ್ಲದೆ ಸ್ಯಾನಿಟೈಸರ್ ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸುತ್ತಿರುತ್ತೇನೆ. ಬೊಂಡಪಳ್ಳಿ ಮಂಡಲ್ ಕ್ವಾರಂಟೈನ್ ಕೇಂದ್ರದಿಂದ ತಾವು ದೂರವಿದ್ದೇನೆ. ಅಲ್ಲಿ ವಿಶೇಷ ಅಧಿಕಾರಿಗಳು ಇದ್ದಾರೆ, ಅಗತ್ಯಬಿದ್ದರೆ ಅಲ್ಲಿಗೆ ಕೂಡ ಹೋಗಬೇಕಾಗುತ್ತದೆ ಎನ್ನುತ್ತಾರೆ.

ಡಾ ಜಾನ್ಸಿಯವರಿಗೆ ಮಾತೃತ್ವ ರಜೆ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಈ ಕೊರೋನಾ ಸೋಂಕು, ಲಾಕ್ ಡೌನ್ ನ ಕಷ್ಟದ ಸಮಯದಲ್ಲಿ ಮನೆಯಲ್ಲಿ ಕೂರುವ ಬದಲು ಆಸ್ಪತ್ರೆಗೆ ಹೋಗಿ ಜನರಿಗೆ ಆರೋಗ್ಯ ಸೇವೆ ನೀಡುವುದೇ ಮುಖ್ಯ ಎಂದು ಭಾವಿಸಿದ್ದಾರೆ. ಇದಕ್ಕೆ ಅವರ ಪತಿ ಡಾ ಪ್ರಶಾಂತ್ ಅವರ ಬೆಂಬಲ, ಪ್ರೋತ್ಸಾಹವಿದೆಯಂತೆ. ಅವರು ಪಕ್ಕದ ನೆಲ್ಲಿಮೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ದೇವರು ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಈ ಬಿಕ್ಕಟ್ಟಿನ ಸಮಯದಲ್ಲಿ ಮನೆಯಲ್ಲಿ ಕುಳಿತು ನಮ್ಮ ಸುಖ ಯೋಚಿಸುವ ಬದಲು ಕೆಲಸ ಮಾಡುವುದು ನನ್ನ ಕರ್ತವ್ಯ ಎನ್ನುತ್ತಾರೆ ಡಾ ಜಾನ್ಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com