ಬಿಜೆಪಿ ಶಾಸಕನಿಗೆ ಅಕ್ರಮವಾಗಿ ಸಂಚಾರಿ ಪಾಸ್; ಬಿಹಾರದಲ್ಲಿ ಅಧಿಕಾರಿ ಅಮಾನತು!

ಶಾಸಕನ ಮಗಳನ್ನು ಕರೆತರಲು ಅಕ್ರಮವಾಗಿ ಸಂಚಾರಿ ಪಾಸ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಶಾಸಕನ ಮಗಳನ್ನು ಕರೆತರಲು ಅಕ್ರಮವಾಗಿ ಸಂಚಾರಿ ಪಾಸ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

ಕೊರೋನಾ ವೈರಸ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತರಲು ಬಿಹಾರ ಸರ್ಕಾರ ನಿರಾಕರಿಸಿದ್ದರೂ, ಬಿಜೆಪಿ ಶಾಸಕ ಅನಿಲ್ ಸಿಂಗ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಗಳನ್ನು  ಕರೆತಂದಿದ್ದರು. ಶಾಸಕನಿಗೆ ಅಂತರ್ ರಾಜ್ಯ ಸಂಚಾರಕ್ಕೆ ಅಕ್ರಮವಾಗಿ ಪಾಸ್ ನೀಡಿದ್ದ ಬಿಹಾರದ ನವಾಡಾ ಜಿಲ್ಲೆಯ ಸಾದರ್ ನ ಸಬ್ ಡಿವಿಷನಲ್ ಅಧಿಕಾರಿ ಅನುಕುಮಾರ್ ಅವರನ್ನು ಇದೀಗ ಅಮಾನತು ಮಾಡಲಾಗಿದೆ.

ಏನಿದು ಘಟನೆ?
ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತರಲು ಬಿಹಾರ ಸರ್ಕಾರ ನಿರಾಕರಿಸಿದ್ದರೂ, ಬಿಜೆಪಿ ಶಾಸಕ ಅನಿಲ್ ಸಿಂಗ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಗಳನ್ನು ಕರೆತಂದಿದ್ದರು. ಹಿಸೂವಾ ಕ್ಷೇತ್ರವನ್ನು  ಪ್ರತಿನಿಧಿಸುತ್ತಿರುವ ಅನಿಲ್ ಸಿಂಗ್, ತಮ್ಮ ವೈಯಕ್ತಿಕ ವಾಹನದಲ್ಲಿ ಕೋಟಾಗೆ ತೆರಳಿ ಮಗಳು ಹಾಗೂ ಪತ್ನಿಯನ್ನು ಕರೆತಂದಿದ್ದರು. ಇದಕ್ಕಾಗಿ ವಾಹನಕ್ಕೆ ನವಾಡ ಎಸ್‌ಡಿಎಂನಿಂದ ವಿಶೇಷ ಪಾಸ್ ಕೂಡ ಪಡೆದಿದ್ದರು. ಆದರೆ ಇದೇ ವಿಚಾರ ಬಿಹಾರದಲ್ಲಿ ವ್ಯಾಪಕ ರಾಜಕೀಯ ಟೀಕೆಗೆಳಿಗೆ  ದಾರಿ ಮಾಡಿಕೊಟ್ಟಿತ್ತು. 

ವಿದ್ಯಾರ್ಥಿಗಳನ್ನು ಕೋಟಾದಿಂದ ಕರೆ ತರುವುದು ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಅಣಕವಾಗುತ್ತದೆ ಎಂದು ಶನಿವಾರವರೆಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಾದಿಸುತ್ತಿದ್ದರು. ಅಲ್ಲದೆ ಬಿಹಾರ ಶಾಸಕರ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಿತೀಶ್ ಕುಮಾರ್ ಅವರ  ಮಾಜಿ ಆಪ್ತ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಟ್ವಿಟ್ಟರ್‌ನಲ್ಲಿ ನಿತೀಶ್ ಕಾರ್ಯವೈಖರಿ ಕುರಿತು ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಕೋಟಾದಲ್ಲಿ ಸಿಕ್ಕಿಹಾಕಿಕೊಂಡಿರುವ ನೂರಾರು ವಿದ್ಯಾರ್ಥಿಗಳಿಗೆ ನೆರವಾಗುವಂತೆ ಮಾಡಿಕೊಂಡಿದ್ದ ಮನವಿಯನ್ನು ನಿತೀಶ್  ತಿರಸ್ಕರಿಸಿದ್ದರು. ಇದೀಗ ಸರ್ಕಾರ ಬಿಜೆಪಿ ಶಾಸಕನಿಗೆ ಪಾಸ್ ನೀಡಿದೆ. ನಿಮ್ಮ ಘನತೆ ಏನಾಯಿತು? ಎಂದು ಪ್ರಶಾಂತ್ ಕಿಶೋರ್ ಮಾತಿನ ಚಾಟಿ ಬೀಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದ ವಿದ್ಯಾರ್ಥಿಗಳನ್ನು ಕೋಟಾದಿಂದ ಕರೆ ತಂದ ಬಳಿಕ ಅಂಥದ್ದೇ ಕ್ರಮಕ್ಕೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದವು. ಆದರೆ ಅದು ಲಾಕ್‌ಡೌನ್‌ನ ಅಣಕವಾಗುತ್ತದೆ ಎಂದು ನಿತೀಶ್ ಮನವಿಯನ್ನು  ತಿರಸ್ಕರಿಸಿದ್ದರು. ಇದೇ ಕಾರಣಕ್ಕೆ ಇದೀಗ ಬಿಜೆಪಿ ಶಾಸಕನಿಗೆ ಪಾಸ್ ನೀಡಿದ್ದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರ 149 ವಿದ್ಯಾರ್ಥಿಗಳು ಕೋಟಾದಿಂದ ಬಿಹಾರದ ವಿವಿಧ ಜಿಲ್ಲೆಗಳಿಗೆ ತಾವಾಗಿಯೇ ವಾಪಸ್ಸಾಗಿದ್ದು, ಎಲ್ಲರೂ ಕ್ವಾರಂಟೈನ್‌ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com