ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಪ್ರತಿ ಕುಟುಂಬಕ್ಕೆ 7,500 ರೂ. ನೀಡಲಿ: ಸೋನಿಯಾ ಗಾಂಧಿ

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮೇ 3 ರಂದು ಲಾಕ್‌ಡೌನ್ ಮುಗಿದ ನಂತರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ಕಲ್ಪನೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ. 
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮೇ 3 ರಂದು ಲಾಕ್‌ಡೌನ್ ಮುಗಿದ ನಂತರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ಕಲ್ಪನೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ. 

ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ಈಗ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿರುವವರ ಪ್ರತಿ ಕುಟುಂಬಕ್ಕೆ ಕನಿಷ್ಠ 7,500 ರೂಪಾಯಿ ನೀಡಬೇಕು ಎಂದು ಸೋನಿಯಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೊವಿಡ್‍-19 ಗಾಗಿ ದೇಶದಲ್ಲಿ ಕಡಿಮೆ ಪ್ರಮಾಣದ ಪರೀಕ್ಷೆಗಳನ್ನು ಮುಂದುವರೆಸುತ್ತಿರುವ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಲಾಕ್ ಡೌನ್ ಜಾರಿಗೊಳಿಸಿದ ನಂತರ ಇಲ್ಲಿ ಎರಡನೇ ಬಾರಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಗೆ ನ್ಯಾಯಸಮ್ಮತವಾಗಿ ನೀಡಬೇಕಾದ ಹಣವನ್ನು ತಡೆಹಿಡಿಯಲಾಗಿದೆ ಎಂದು ದೂರಿದ್ದಾರೆ.

ಕೊರೋನಾ ವೈರಸ್ ಉಲ್ಬಣದಿಂದ ದೇಶ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಆಡಳಿತಾರೂಢ ಬಿಜೆಪಿ ಪೂರ್ವಾಗ್ರಹಪೀಡಿತ ಕೋಮುವಾದ ಮತ್ತು ದ್ವೇಷದ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. 

ಲಾಕ್‌ಡೌನ್ ಮುಂದುವರೆದಿದ್ದು, ಸಮಾಜದ ಎಲ್ಲಾ ವರ್ಗದವರು ತೀವ್ರ ಸಂಕಷ್ಟ ಮತ್ತು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ರೈತರು ಮತ್ತು ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ತೀವ್ರವಾಗಿ ಬಾಧಿತರಾಗಿದ್ದಾರೆ. ವಾಸ್ತವಿಕವಾಗಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಇದರಿಂದ ಕೋಟ್ಯಂತರ ಜನರ ಜೀವನೋಪಾಯ ಕೊಚ್ಚಿಹೋಗಿದೆ. ಮೇ 3 ರ ನಂತರ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆಲೋಚನೆ ಇದ್ದಂತೆ ಕಂಡುಬರುತ್ತಿಲ್ಲ. ಸದ್ಯದ ಪರಿಸ್ಥಿತಿ ಮತ್ತು ಮೇ 3ರ ನಂತರದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ. 

ದೇಶದಲ್ಲಿ ಕಡಿಮೆ ಪ್ರಮಾಣದ ಕೊವಿಡ್‍-ಪರೀಕ್ಷೆಗಳು ಗಂಭೀರ ವಿಷಯವಾಗಿದೆ ಎಂದ ಅವರು, ಪರೀಕ್ಷೆ, ಜನರಲ್ಲಿ ಸೋಂಕು ಪತ್ತೆ ಮಾಡುವುದು ಮತ್ತು ಸಂಪರ್ಕತಡೆಗಳಿಗೆ ಪರ್ಯಾಯ ಮಾರ್ಗವಿಲ್ಲ ಎಂದು ನಾವು ಪದೇ ಪದೇ ಪ್ರಧಾನಿಗೆ ತಿಳಿಸಿದ್ದೇವೆ. ದುರದೃಷ್ಟವಶಾತ್, ಪರೀಕ್ಷೆಗಳ ಪ್ರಮಾಣ ಇನ್ನೂ ಕಡಿಮೆ ಇದೆ. ಪರೀಕ್ಷಾ ಕಿಟ್‌ಗಳು ಇನ್ನೂ ಕಡಿಮೆ ಸಂಖ್ಯೆಯಲ್ಲಿ ಪೂರೈಸಲಾಗುತ್ತಿರುವುದಲ್ಲದೆ, ಇವು ಕಳಪೆ ಗುಣಮಟ್ಟದ್ದಾಗಿವೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಪೂರೈಸಲಾಗುತ್ತಿರುವ ಪಿಪಿಇ ಕಿಟ್‌ಗಳ ಗುಣಮಟ್ಟ ಸರಿಯಿಲ್ಲ ಎಂದು ದೂರಿದ್ದಾರೆ. 

‘ನಾವೆಲ್ಲ ಕೊರೋನಾ ವೈರಸ್ ಅನ್ನು ಒಗ್ಗಟ್ಟಿನಿಂದ ನಿಭಾಯಿಸುತ್ತಿರುವಾಗ, ಪೂರ್ವಗ್ರಹಪೀಡಿತ ಕೋಮುವಾದ ಮತ್ತು ದ್ವೇಷದ ವೈರಸ್ ಹರಡುವುದನ್ನು ಬಿಜೆಪಿ ಮುಂದುವರೆಸಿದೆ. ಇದರಿಂದ ನಮ್ಮ ಸಾಮಾಜಿಕ ಸಾಮರಸ್ಯಕ್ಕೆ ತುಂಬಾ ಧಕ್ಕೆಯಾಗುತ್ತಿದೆ. ಈ ಹಾನಿಯನ್ನು ಸರಿಪಡಿಸಲು ನಮ್ಮ ಪಕ್ಷ ಶ್ರಮಿಸಬೇಕಾಗಿದೆ.’ ಎಂದು ಸೋನಿಯಾಗಾಂಧಿ ಕರೆ ನೀಡಿದ್ದಾರೆ. 

ಲಾಕ್‍ಡೌನ್‍ ಜಾರಿಗೊಳಿಸಿದಾಗಿನಿಂದ ಪ್ರಧಾನ ಮಂತ್ರಿಯೊಂದಿಗೆ ಅನೇಕ ಬಾರಿ ಚರ್ಚೆ ನಡೆಸಿದರೂ, ದೀನದಲಿತರು, ವಲಸೆ ಕಾರ್ಮಿಕರು ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆಯನ್ನು ನಿವಾರಿಸಲು ಅನೇಕ ಸಲಹೆಗಳನ್ನು ನೀಡಿದ್ದರೂ, ಸರ್ಕಾರ ಈ ಸಲಹೆಗಳಂತೆ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com