ಕೊರೋನಾ ಸಂದರ್ಭದಲ್ಲೂ ಬಿಜೆಪಿ ದ್ವೇಷ, ಕೋಮು ಭಾವನೆ ಕೆರಳಿಸುವ ಕಾರ್ಯ ಮುಂದುವರೆಸಿದೆ: ಸೋನಿಯಾ ಗಾಂಧಿ

ದೇಶದಲ್ಲಿ ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿಯೂ ಬಿಜೆಪಿ ದ್ವೇಷ ಬಿತ್ತುವ ಹಾಗೂ ಕೋಮು ಬಾವನೆ ಕೆರಳಿಸುವ ತನ್ನ ಕೆಲಸವನ್ನು ಮುಂದುವರೆಸಿದೆ. ದೇಶ ಒಟ್ಟಾಗಿರುವಾಗ ಬಿಜೆಪಿ ಕೋಮು ವಿಭಜನೆಯ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿಯೂ ಬಿಜೆಪಿ ದ್ವೇಷ ಬಿತ್ತುವ ಹಾಗೂ ಕೋಮು ಬಾವನೆ ಕೆರಳಿಸುವ ತನ್ನ ಕೆಲಸವನ್ನು ಮುಂದುವರೆಸಿದೆ. ದೇಶ ಒಟ್ಟಾಗಿರುವಾಗ ಬಿಜೆಪಿ ಕೋಮು ವಿಭಜನೆಯ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. 

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿರುವ ಸೋನಿಯಾ ಗಾಂಧಿಯವರು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ನಮ್ಮ ಸಾಮಾಜಿಕ ಸೌಹಾರ್ದತೆಗೆ ದೊಡ್ಡ ನಷ್ಟವನ್ನು ಬಿಜೆಪಿ ಎದುರು ಮಾಡುತ್ತಿದೆ. ಈ ನಷ್ಟವನ್ನು ಸರಿಪಡಿಸಲು ನಮ್ಮ ಪಕ್ಷ ಹಾಗೂ ನಾವೆಲ್ಲರೂ ಕಠಿಣ ಪರಿಶ್ರಮ ಪಡಬೇಕಿದೆ ಎಂದು ಹೇಳಿದ್ದಾರೆ. 

ಕಳೆದ ಮೂರು ವಾರಗಳಿಂದ ಕೊರೋನಾ ವೈರಸ್ ಜನ ಜೀವನವನ್ನು ಅಸ್ತವ್ಯಸ್ತಗೊಳ್ಳುವಂತೆ ಮಾಡಿದ್ದು, ವೈರಸ್ ವಿರುದ್ಧ ಹೋರಾಡಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ನಮ್ಮ ಪಕ್ಷ ಕೂಡ ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು  ನೀಡಿದೆ. ಈ ಕುರಿತು ಪ್ರಧಾನಮಂತ್ರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇವೆ. ಆದರೆ, ನಾವು ನೀಡಿದ ಸಲಹೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿಲ್ಲ. ಈ ಕುರಿತು ಸರ್ಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆಗಲೂ ಬಂದಿಲ್ಲ. 

ಕೇವಲ ನೆಪ ಮಾತ್ರಕ್ಕೆ ವಿರೋಧ ಪಕ್ಷಗಳ ಅನಿಸಿಕೆ ಕೇಳುತ್ತಿರುವ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ನೀಡಿದ ಯಾವುದೇ ಸಲಹೆಗಳನ್ನು ಅಳವಡಿಸಿಕೊಳ್ಲದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. 

ಕೇಂದ್ರ ಸರ್ಕಾರ ಲಾಕ್'ಡೌನ್ ಹೇರಿಕೆ ಬಳಿಕ ಬಡವರ ಪರ ಸಹಾನುಭೂತಿಯನ್ನೇ ತೋರುತ್ತಿಲ್ಲ ಎಂದು ಇದೇ ವೇಳೆ ಆರೋಪಿಸಿರುವ ಸೋನಿಯಾ ಅವರು, ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದಾರೆ. 

ಮೇ.3ರ ಬಳಿಕ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪರಿಜ್ಞಾನವೇ ಇಲ್ಲದಂತಾಗಿದೆ. ಲಾಕ್'ಡೌನ್ ತೆರವುಗೊಳಿಸಿದ ಬಳಿಕ ಪರಿಸ್ಥಿತಿ ಮತ್ತಷ್ಟು ಕಠಿಣಗೊಳ್ಳಲಿದೆ ಎಂದಿದ್ದಾರೆ.

ಬಳಿಕ ಮಾತನಾಡಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಿಕ್ಕ ಬಳಿಕ ಲಾಕ್'ಡೌನ್ ಯಶಸ್ಸಿನ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬರಲಿದೆ. ಕೊರೋನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರ ಅತ್ಯಗತ್ಯವಾಗಿರುತ್ತದೆ. ಕೊರೋನಾ ಕುರಿತು ದಾಖಲಾಗುತ್ತಿರುವ ಸಂಖ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಇರುವ ಸಂಪನ್ಮೂಲಗಳ ಮೂಲಕವೇ ಹೋರಾಟ ಮಾಡಬೇಕು ಎಂದು ತಿಳಿಸಿದ್ದಾರೆ. 

ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, ರಾಜ್ಯಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ಸಹಾಯ ಮಾಡದ ಹೊರತು ಕೊರೋನಾ ವಿರುದ್ಧ ಹೋರಾಟ ಮಾಡುವುದು ಕಷ್ಟಕರವಾಗಿದೆ. ರಾಜ್ಯಗಳಿಗೆ ಕೇಂದ್ರ ಸರ್ಕಾರ ದೊಡ್ಡ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಬಳಿಕವಷ್ಟೇ ರಾಜ್ಯಗಳಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯ ಎಂದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com