ಇ–ಗ್ರಾಮ್ ಸ್ವರಾಜ್, ಸ್ವಾಮಿತ್ವ ಯೋಜನೆಗೆ ಪ್ರಧಾನಮಂತ್ರಿ ಚಾಲನ; ಚಿಕ್ಕಬಳ್ಳಾಪುರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಚಾಯತ್ ರಾಜ್ ದಿನದ ಅಂಗವಾಗಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಶುಭಾಶಯ ಕೋರಿದರು.
ಪಿಎಂ ಮೋದಿ
ಪಿಎಂ ಮೋದಿ

ನವದೆಹಲಿ:  ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಚಾಯತ್ ರಾಜ್ ದಿನದ ಅಂಗವಾಗಿ ಇ- ಗ್ರಾಮ್ ಸ್ವರಾಜ್ ಮತ್ತು ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಿ ಶುಭಾಶಯ ಕೋರಿದರು. ಇದೇ ವೇಳೆ ಕೋವಿಡ್ ನಿಯಂತ್ರಣಕ್ಕಾಗಿ ಚಿಕ್ಕಬಳ್ಳಾಪುರದಲ್ಲಿ ತೆಗೆದುಕೊಳ್ಲಲಾಗಿರುವ ಕ್ರಮದ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ದೇಶದ ಪಂಚಾಯತ್ ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಪುರಸ್ಕೃತ ಪಂಚಾಯತ್ ಗಳು ಮತ್ತು ಜನಪ್ರತಿನಿಧಿಗಳನ್ನು ಹಾಗೂ ಆ ಗ್ರಾಮದ ನಿವಾಸಿಗಳನ್ನು ಅಭಿನಂದಿಸಿದರು. ಸಾರ್ವಜನಿಕರು ಪ್ರಶಸ್ತಿ ಪುರಸ್ಕೃತ ಪಂಚಾಯತ್ ಗಳ ಮಾಹಿತಿಯನ್ನು ಜಾಲತಾಣದಿಂದ ಪಡೆಯಬಹುದಾಗಿದೆ ಎಂದರು.

ಮುಂದುವರಿದು ಅವರು, “ಕೊರೊನಾ ಮಹಾಮಾರಿ ನಾವೆಲ್ಲರೂ ಕೆಲಸ ಮಾಡುವ ರೀತಿಯನ್ನೇ ಬಹುವಾಗಿ ಬದಲಿಸಿದೆ. ಈ ಮುನ್ನ ನಾವೆಲ್ಲರೂ ಇಂತಹ ಕಾರ್ಯಕ್ರಮದಲ್ಲಿ ಎದುರು ಬದಿರು ಕುಳಿತು ಚರ್ಚಿಸುತ್ತಿದ್ದೆವು. ಇದೀಗ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದೇವೆ. ದೇಶದ ಲಕ್ಷಾಂತರ ಸರ್ ಪಂಚ್ ಗಳು ತಂತ್ರಜ್ಞಾನದ ನೆರವಿನಿಂದ ಪರಸ್ಪರ ಸಂಪರ್ಕಿತವಾಗಿವೆ” ಎಂದರು.

ಕೊರೊನಾ ಅನೇಕ ಸಂಕಷ್ಟಗಳನ್ನು ತಂದೊಡ್ಡಿದ್ದರೂ ಹೊಸ ಪಾಠವನ್ನೂ ಸಂದೇಶವನ್ನೂ ನೀಡಿದೆ. ಹಿಂದೂಸ್ತಾನದ ಎಲ್ಲಾ ನಾಗರಿಕರು, ಅವರು ಹಳ್ಳಿಯಲ್ಲಿರಲಿ ಅಥವಾ ನಗರದಲ್ಲಿರಲಿ ಜನರಿಗೆ ಕೊರೊನಾ ಸಂಕಟದ ಪ್ರಮುಖ ಸಂದೇಶ ನೀಡಿದ್ದು ಈ ಮೂಲಕ ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಬೇಕು ಎಂಬುದನ್ನು ಕಲಿಸಿಕೊಟ್ಟಿದೆ. 

ಈ ಬದಲಾದ ಸನ್ನಿವೇಶದಲ್ಲಿ ಪಂಚಾಯತ್ ವ್ಯವಸ್ಥೆ ಬಲಗೊಂಡರೆ ಮಾತ್ರ ಜನರು ಇನ್ನಷ್ಟು ಸದೃಢರಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ಹೀಗಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಸೌಕರ್ಯವನ್ನು ಆಧುನಿಕಗೊಳಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸಿತು. ನಾಲ್ಕೈದು ವರ್ಷಗಳ ಹಿಂದೆ 100 ಕ್ಕಿಂತ ಕಡಿಮೆ ಪಂಚಾಯತ್ ಗಳಲ್ಲಿ ಮಾತ್ರ ಅಂತರ್ಜಾಲ ಸಂಪರ್ಕ ಹೊಂದಿದ್ದು ಇದೀಗ ಬಹುತೇಕ ಎಲ್ಲಾ ಕಡೆ ಬ್ರಾಡ್ ಬ್ಯಾಂಡ್ ಸೌಲಭ್ಯವಿದೆ. ಅನೇಕ ಗ್ರಾಮಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು ತಲೆ ಎತ್ತಿವೆ.

ಇಂದು ಎಲ್ಲ ಗ್ರಾಮಪಂಚಾಯತ್ ಗಳು ವಿಡಿಯೋ ಕಾನ್ಫರೆನ್ಸ್ ನಿಂದ ಸಂಪರ್ಕಿತವಾಗಲು ತಂತ್ರಜ್ಞಾನ ಎಲ್ಲೆಡೆ ದೊರೆಯುವಂತಾಗಿರುವುದೇ ಕಾರಣವಾಗಿದೆ. ಹೀಗಾಗಿ ಶುಕ್ರವಾರ ಎರಡು ಪ್ರಮುಖ ಯೋಜನೆಗಳಿಗೂ ಚಾಲನೆ ನೀಡಲಾಗಿದೆ.

ಮೊದಲನೆಯದು ಇ –ಗ್ರಾಮ್ ಸ್ವರಾಜ್ ಮತ್ತು ಎರಡನೆಯದು ಸ್ವಾಮಿತ್ವ ಯೋಜನೆ. ಪ್ರತಿ ಗ್ರಾಮವಾಸಿಗಳಿಗೆ ಇ –ಗ್ರಾಮ್ ಸ್ವರಾಜ್ ಮೂಲಕ ಸರಳೀಕೃತ ವೆಬ್ ಪೋರ್ಟಲ್ ಮೂಲಕ ಗ್ರಾಮದ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಇದು ಡಿಜಿಟಲೀಕರಣದತ್ತ ದೊಡ್ಡ ಹೆಜ್ಜೆಯಾಗಿದೆ.

ಇದು ಗ್ರಾಮ ಪಂಚಾಯತ್ ಗಳ ವಿವಿಧ ಕೆಲಸಗಳಿಗೆ ಏಕ ಕೊಂಡಿಯಾಗಿ ನಿರ್ವಹಿಸಲು ನೆರವಾಗಲಿದೆ.ಒಂದೊಂದು ಕೆಲಸಕ್ಕೆ ಒಂದೊಂದು ಪೋರ್ಟಲ್, ಆಪ್ ಅಗತ್ಯವಿರುವುದಿಲ್ಲ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ತಮ್ಮ ಗ್ರಾಮ ಪಂಚಾಯತ್ ಗಳಲ್ಲಿ ಯಾವ ಯಾವ ಕೆಲಸ ನಡೆಯುತ್ತಿದೆ, ಎಷ್ಟು ಪ್ರಗತಿಯಲ್ಲಿದೆ ಎಂಬುದನ್ನು ಮೊಬೈಲ್ ನಲ್ಲೇ ತಿಳಿಯಬಹುದಾಗಿದೆ ಎಂದು ಪ್ರಧಾನಿ ವಿವರಿಸಿದರು.

ಇ – ಗ್ರಾಮ್ ಸ್ವರಾಜ್ ಮೂಲಕ ಎಲ್ಲರೂ ಗ್ರಾಮಗಳಲ್ಲಿ ಸ್ವತ್ತಿನ ಸ್ಥಿತಿ ತಿಳಿಯಬಹುದಾಗಿದೆ. ಸ್ವಾಮಿತ್ವ ಯೋಜನೆ ಎಲ್ಲವನ್ನೂ ಸರಿಪಡಿಸುವ ಪ್ರಯತ್ನವಾಗಿದೆ. ಡ್ರೋನ್ ಮೂಲಕ ಇಡೀ ಗ್ರಾಮದ ಸ್ವತ್ತಿನ ಮ್ಯಾಪಿಂಗ್ ಆಗಲಿದೆ, ಈ ಮೂಲಕ ಸಂಪತ್ತಿನ ಮಾಲೀಕರಿಗೆ ಸಂಪತ್ತಿನ ಸ್ವಾಮ್ಯತ್ವ ಪತ್ರ – ಟೈಟಲ್ ಡೀಡ್ ನೀಡಲಾಗುತ್ತದೆ. ಇದರಿಂದ ಜಗಳ, ಕದನ ಇಲ್ಲವಾಗಿ ಗ್ರಾಮಗಳ ಅಭಿವೃದ್ಧಿಯಾಗುತ್ತದೆ. ನಗರಗಳಂತೆಯೇ ಗ್ರಾಮಗಳಲ್ಲೂ ಬ್ಯಾಂಕ್ ಗಳಿಂದ ಸುಲಭವಾಗಿ ಹಣ ಪಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ, ಉತ್ತರಾಖಂಡ್, ಕರ್ನಾಟಕ ರಾಜ್ಯಗಳಲ್ಲಿ ಆರಂಭಿಕವಾಗಿ ಈ ಯೋಜನೆ ಜಾರಿಯಾಗಲಿದ್ದು ನಂತರ ದೇಶದ ಎಲ್ಲ ಹಳ್ಳಿಗಳಿಗೆ ವಿಸ್ತರಿಸಲಾಗುವುದು. 


ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯದೇ ಇದ್ದರೂ ತಮ್ಮ ಸಂಸ್ಕಾರಗಳ ಮೂಲಕ ವಿದ್ವಾಂಸರಿಗೂ ಪ್ರೇರಣೆ ನೀಡುವ ಅರಿವನ್ನು ಹೊಂದಿದ್ದಾರೆ ಎಂಬುದು ಗ್ರಾಮ ನಿವಾಸಿಗಳಿಂದ ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಿಳಿದು ಬಂದಿದೆ. ಹೀಗಾಗಿ ಎಲ್ಲ ಗ್ರಾಮವಾಸಿಗಳಿಗೂ ನಮಿಸುವುದಾಗಿ ಪ್ರಧಾನಿ ಹೇಳಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಬಹುದಾಗಿದೆ ಎಂದು ಅವರು ಪುನರುಚ್ಚರಿಸಿದರು. 

ಕಳೆದೆರಡು ಮೂರು ತಿಂಗಳಲ್ಲಿ ಭಾರತೀಯ ನಾಗರಿಕರು ಮಿತವಾದ ಸಂಪನ್ಮೂಲಗಳೊಂದಿಗೆ ಅನೇಕ ಸಂಕಷ್ಟಗಳ ನಡುವೆಯೂ ಕೊರೊನಾ ವೈರಾಣು ಮೆಟ್ಟಿನಿಲ್ಲಲು ಸಂಕಲ್ಪ ತೊಟ್ಟು ಹೋರಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶವನ್ನು ರಕ್ಷಿಸಲು ಮತ್ತು ದೇಶ ಅಭಿವೃದ್ಧಿ ಪಥದಲ್ಲಿ ನಡೆಯಲು ಅಗತ್ಯ ಕ್ರಮಗಳೊಂದಿಗೆ ಮುನ್ನಡೆಯುತ್ತಿರುವುದಾಗಿ ಪ್ರಧಾನಿ ಹೇಳಿದರು

ಬಳಿಕ ಗ್ರಾಮ ಪಂಚಾಯತ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಅವರು, ಚಿಕ್ಕಬಳ್ಳಾಪುರದ ಪಂಚಾಯತ್ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್ ಗ್ರಾಮದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಸರ್ಕಾರದ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ನೀಡಿದರು. ಗ್ರಾಮಪಂಚಾಯತ್ ಕಾರ್ಯಗಳ ವಿವರ ಪಡೆದು, ಯೋಜನೆ ಉತ್ತಮವಾಗಿ ರೂಪಿಸಿರುವುದಾಗಿ ಪ್ರಧಾನಿ ಶ್ಲಾಘಿಸಿದರು. 

ಇತರ ಪಂಚಾಯತ್ ಅಧಿಕಾರಿಗಳೊಂದಿಗೂ ಪ್ರಧಾನಿ ಮಾತುಕತೆ ನಡೆಸಿ ಅಲ್ಲಿನ ಕೆಲಸ ಕಾರ್ಯಗಳ ಬಗ್ಗೆ ವಿವರ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com