ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಮುಂದುವರಿಕೆ, ರಾಜ್ಯಗಳು ಮಾರ್ಗಸೂಚಿಗಳನ್ನು ಶಿಸ್ತಿನಿಂದ ಪಾಲಿಸಿ: ಪ್ರಧಾನಿ ಮೋದಿ
ಕೊರೋನಾ ವೈರಸ್ ಸೋಂಕು ತೀವ್ರವಾಗಿರುವ ಭಾಗಗಳಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published: 27th April 2020 02:51 PM | Last Updated: 27th April 2020 04:24 PM | A+A A-

ನವದೆಹಲಿ: ಕೊರೋನಾ ವೈರಸ್ ಸೋಂಕು ತೀವ್ರವಾಗಿರುವ ಭಾಗಗಳಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊರೋನಾ ಲಾಕ್ ಡೌನ್ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲು ಕರೆಯಲಾಗಿದ್ದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿ, ದೇಶದ ಆರ್ಥಿಕ ವಿಚಾರದಲ್ಲಿ ಆತಂಕ, ಭಯಪಡುವ ಅಗತ್ಯವಿಲ್ಲ, ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಕೊರೋನಾ ವೈರಸ್ ತಡೆಗಟ್ಟುವುದೇ ಈ ಸಂದರ್ಭದಲ್ಲಿ ನಮಗೆ ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ಐದು ರಾಜ್ಯಗಳ ಮುಖ್ಯಮಂತ್ರಿಗಳು ಮೇ3ರ ನಂತರ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ಹೇಳಿದರೆ, ನಾಲ್ವರು ಮುಂದುವರಿಸಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ತಮ್ಮ ರಾಜ್ಯಗಳ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ನ ಪ್ರಮಾಣದ ಆಧಾರದ ಮೇಲೆ ರೆಡ್, ಆರೆಂಜ್ ಮತ್ತು ಗ್ರೀನ್ ವಲಯಗಳನ್ನಾಗಿ ವಿಂಗಡಿಸಿ ಲಾಕ್ ಡೌನ್ ನ್ನು ಹಂತಹಂತವಾಗಿ ಸಡಿಲಿಸುವ ಅಥವಾ ತೆಗೆದುಹಾಕುವ ಬಗ್ಗೆ ಯೋಜನೆ ರೂಪಿಸಿ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗ್ರೀನ್ ಮತ್ತು ಆರೆಂಜ್ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ತೆರೆಯಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ನಗರ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಲಾಕ್ ಡೌನ್ ಮುಗಿದ ನಂತರವೂ ಸಾಮಾಜಿಕ ಅಂತರದೊಂದಿಗೆ ಮಾಸ್ಕ್, ಗ್ಲೌಸ್ ಧರಿಸಿ ಮುಂದುವರಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ. ಕೋವಿಡ್-19 ಸೋಂಕಿಗೆ ಕಡಿಮೆ ಪರಿಣಾಮ ಬೀರಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ ವಿನಾಯ್ತಿ ನೀಡುವ ಸಾಧ್ಯತೆಯಿದೆ.
ಮೇ3ರ ನಂತರವೂ ಕೆಲ ದಿನಗಳವರೆಗೆ ಸಾರ್ವಜನಿಕ ಸಾರಿಗೆಗಳು, ಶಾಲಾ-ಕಾಲೇಜುಗಳ ಆರಂಭಕ್ಕೆ ನಿರ್ಬಂಧ, ಧಾರ್ಮಿಕ ಸಭೆ-ಸಮಾರಂಭಗಳು, ಜನದಟ್ಟಣೆ ಸೇರುವ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.
ಸಭೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರದಿಂದ ಹಣಕಾಸು ಪ್ಯಾಕೆಜ್ ಬಿಡುಗಡೆಗೆ ಒತ್ತಾಯಿಸಿದ್ದಾರೆ.