ಕಂಟೈನ್ಮೆಂಟ್ ಝೋನ್ ನಲ್ಲಿದ್ದಾರೆಂದು ದಾಖಲಿಸಿಕೊಳ್ಳಲು ಆಸ್ಪತ್ರೆಗಳ ನಕಾರ: ಸಕಾಲಕ್ಕೆ ಚಿಕಿತ್ಸೆ ದೊರಕದೆ ನಾಣ್ಯ ನುಂಗಿದ್ದ ಬಾಲಕ ಸಾವು!

ಕಂಟೈನ್ಮೆಂಟ್ ಝೋನ್ ನಲ್ಲಿ ನೆಲೆಸಿದ್ದಾರೆಂಬ ಕಾರಣಕ್ಕೆ ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದ ಪರಿಣಾಮ ನಾಣ್ಯ ನುಂಗಿದ್ದ ಮೂರು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. 
ಮೃತಪಟ್ಟ ಬಾಲಕ
ಮೃತಪಟ್ಟ ಬಾಲಕ

ಕೊಚ್ಚಿ: ಕಂಟೈನ್ಮೆಂಟ್ ಝೋನ್ ನಲ್ಲಿ ನೆಲೆಸಿದ್ದಾರೆಂಬ ಕಾರಣಕ್ಕೆ ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದ ಪರಿಣಾಮ ನಾಣ್ಯ ನುಂಗಿದ್ದ ಮೂರು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. 

ಪೃಥ್ವಿರಾಜ್ (3) ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಬಲಿಯಾದ ಬಾಲಕನಾಗಿದ್ದಾನೆ. ರಾಜು ಹಾಗೂ ನಂದಿನಿ ಎಂಬ ದಂಪತಿಯ ಏಕೈಕ ಪುತ್ರ ಈ ಬಾಲಕನಾಗಿದ್ದಾನೆ. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ಅಚಾನಕ್ ಆಗಿ ಕೈಗೆ ಸಿಕ್ಕ ನಾಣ್ಯವನ್ನು ನುಂಗಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿದ್ದ ವೈದ್ಯರು ಮಕ್ಕಳ ವೈದ್ಯರಿಲ್ಲದ ಕಾರಣ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. 

ಬಳಿಕ ಎರ್ನಾಕುಲಂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿದ್ದ ವೈದ್ಯರು ಸರ್ಕಾರಿ ವೈದ್ಯಕೀಯ ಕಾಲೇಜು ಅಸ್ಪತ್ರೆ, ಆಲಪ್ಪುಳಕ್ಕೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಬಳಿಕ ಅಲ್ಲಿಗೂ ಕರೆದೊಯ್ದಾದಾಗ ಅಲ್ಲಿನ ವೈದ್ಯರು ಮಗುವಿಗೆ ನೀರು, ಆಹಾರ, ಹಣ್ಣು, ಅನ್ನ ನೀಡುವಂತೆ ತಿಳಿಸಿದ್ದಾರೆ. ಆಹಾರ ಸೇವನೆ ಮಾಡಿದ ಬಳಿಕ ನೈಸರ್ಗಿಕವಾಗಿಯೇ ನಾಣ್ಯ ಹೊರಬರುತ್ತದೆ ಎಂದು ತಿಳಿಸಿದ್ದಾರೆ. ಬಳಿಕ ಪೋಷಕರು ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಶನಿವಾರ ರಾತ್ರಿ ಮಗುವಿನ ಆರೋಗ್ಯ ಬಿಗಡಾಯಿಸಿದೆ. ಬಳಿಕ ಮತ್ತೆ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿದೆ. 

ನಾವು ಕಂಟೈನ್ಮೆಂಟ್ ಝೋನ್ ನಲ್ಲಿದ್ದೇವೆಂಬ ಕಾರಣಕ್ಕೆ ಆಸ್ಪತ್ರೆಯ ವೈದ್ಯರು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ರಾತ್ರಿ ವೇಳೆಗೆ ಮಗು ತೀವ್ರವಾಗಿ ಅಳಲು ಆರಂಭಿಸಿತ್ತು. ರಾತ್ರಿ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು ಎಂದು ಮಗುವಿನ ತಾಯಿ ನಂದಿನಿ ಹೇಳಿದ್ದಾರೆ. 

ಎರ್ನಾಕುಲಂ ಆಸ್ಪತ್ರೆಗೆ ತೆರಳಿದ್ದಾಗ ಸಂಜೆ 3 ಗಂಟೆಯಾಗಿತ್ತು. ಎಕ್ಸ್ ರೇಯಲ್ಲಿ ಹೊಟ್ಟೆಯಲ್ಲಿ ನಾಣ್ಯ ಇರುವುದು ಪತ್ತೆಯಾಗಿತ್ತು. ಆದರೆ, ಜೀವಕ್ಕೆ ಯಾವುದೇ ಬೆದರಿಕೆಗಳಿರಲಿಲ್ಲ. ಮಗುವಿನಲ್ಲೂ ಯಾವುದೇ ರೀತಿಯ ಉಸಿರಾಟ ಸಮಸ್ಯೆಗಳು ಕಾಣಿಸಿರಲಿಲ್ಲ. ಮಗು ಆ್ಯಕ್ಟಿವ್ ಆಗಿತ್ತು. ಅದೂ ಅಲ್ಲದೆ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾರು ಇರದ ಕಾರಣ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ತಿಳಿಸಿದ್ದೆವು. ಮಗುವನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಎರ್ನಾಕುಲಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಎ.ಅನಿತಾ ಅವರು ಹೇಳಿದ್ದಾರೆ. 

ಮಗುವಿನಲ್ಲಿ ಯಾವುದೇ ರೀತಿಯ ಜ್ವರ, ಕೆಮ್ಮು ಇರಲಿಲ್ಲ. ಮಗು ಕಂಟೈನ್ಮೆಂಟ್ ಝೋನ್ ನಿಂದ ಬಂದ ಕಾರಣ ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೆವು. ಮಗುವಿನಲ್ಲಿ ಯಾವುದೇ ರೀತಿಯ ಲಕ್ಷಣಗಳೂ ಕಂಡು ಬಂದಿರಲಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com