'5 ಸಾವಿರ ಕೋಟಿ ರೂ. ಮೌಲ್ಯದ ಉಲ್ಕಾ ಶಿಲೆ' ಖರೀದಿಸಲು ಹೋಗಿ ಕೋಟ್ಯಾಂತ ರೂ. ಕಳೆದುಕೊಂಡ ನಿವೃತ್ತ ಯೋಧ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ.5 ಸಾವಿರ ಕೋಟಿಗೆ ಮಾರಾಟವಾಗುವ ಉಲ್ಕಾ ಶಿಲೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದೇವೆಂದು ಹೇಳಿ ನಿವೃತ್ತ ಯೋಧನಿಂದ ದುಷ್ಕರ್ಮಿಗಳ ತಂಡವೊಂದು ರೂ.1.25 ಕೋಟಿ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಡೆಹ್ರಾಡೂನ್: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ.5 ಸಾವಿರ ಕೋಟಿಗೆ ಮಾರಾಟವಾಗುವ ಉಲ್ಕಾ ಶಿಲೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದೇವೆಂದು ಹೇಳಿ ನಿವೃತ್ತ ಯೋಧನಿಂದ ದುಷ್ಕರ್ಮಿಗಳ ತಂಡವೊಂದು ರೂ.1.25 ಕೋಟಿ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಖಿಲಾಫ್ ಸಿಂಗ್ ಭಿಷ್ತ್ ವಂಚನೆಗೊಳಗಾದ ನಿವೃತ್ತ ಯೋಧರಾಗಿದ್ದಾರೆ. ಡೆಹ್ರಾಡೂನ್ ನಿವಾಸಿಯಾಗಿರುವ ಇವರಿಗೆ, ಕೆಲ ವ್ಯಕ್ತಿಗಳು ಸಂಪರ್ಕಕ್ಕೆ ಸಿಕ್ಕಿದ್ದು, ತಮ್ಮ ಬಳಿ ಉಲ್ಕಾ ಶಿಲೆಯೊಂದು ಇದ್ದು, ಅದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ರೂ.5,000 ಸಿಗುತ್ತದೆ. ನಿಮಗೆ ಅತ್ಯಂತ ಕಡಿಮೆ ದರಕ್ಕೆ ಕೊಡಿಸುತ್ತೇವೆಂದು ಆಸೆ ತೋರಿಸಿದ್ದಾರೆ. 

ಇದನ್ನು ನಂಬಿದ ಖಿಲಾಫ್ ಅವರು, ಖರೀದಿ ಮಾಡಲು ಮುಂದಾಗಿದ್ದಾರೆ. ಬಳಿಕ ವಂಚಕರು ರೇರ್ ಆ್ಯಂಟಿಕ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂದು ಹೇಳಿ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿದ್ದಾರೆ. ಆರಂಭದಲ್ಲಿ ವಂಚಕರು ರೂ.10.95 ಲಕ್ಷ ಡೆಪಾಸಿಟ್ ಮಾಡುವಂತೆ ತಿಳಿಸಿದ್ದಾರೆ. ಬಳಿಕ ಹಂತ ಹಂತವಾಗಿ ಹಣ ಕಟ್ಟುವಂತೆ ತಿಳಿಸಿ ರೂ.1.25 ಕೋಟಿ ಪಡೆದಿದ್ದಾರೆ. 

ಬಳಿಕ 2018ರಲ್ಲಿ ಮಾಜಿ ಯೋಧನಿಗೆ ಕರೆ ಮಾಡಿದ ವಂಚಕರು, ಉಲ್ಕಾ ಶಿಲೆ ಹಾನಿಕಾರಕವನ್ನು ಹೊರಸೂಸುವ ಕಾರಣ ಅದನ್ನು ಸುರಕ್ಷಿತ ವಸ್ತುವಿನಲ್ಲಿ ಸಾಗಾಣಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಅಲ್ಲದೆ. ವ್ಯಕ್ತಿಯೊಬ್ಬನನ್ನು ಖಿಲಾಫ್ ಅವರ ಬಳಿ ಕಳುಹಿಸಿದ್ದಾರೆ. 

ಉಲ್ಕಾ ಶಿಲೆ 21 ಕೆಜಿ ತೂಕದವಿದ್ದು, ಪರಿಶೀಲನೆಗಾಗಿ ದೆಹಲಿ ಹಾಗೂ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದೆ. ಪರಿಶೀಲನೆ ಬಳಿಕ ಅಂತಿಮವಾಗಿ ಖಿಲಾಫ್ ಅವರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಭಾರತೀಯ ಸೇನಾಪಡೆ ದಾಳಿ ನಡೆಸಿದ್ದು, ಉಲ್ಕಾಶಿಲೆಯನ್ನು ವಶಪಡಿಸಿಕೊಂಡಿತು ಎಂದು ಹೇಳಿ ವಂಚನೆ ಮಾಡಿದ್ದಾರೆ. 

ವಂಚನೆ ಸಂಬಂಧ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ವಂಚಕರ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 420 (ವಂಚನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಂಚಕರನ್ನು ಶೀಘ್ರಗತಿಯಲ್ಲಿ ಬಂಧನಕ್ಕೊಳಪಡಿಸುವ ವಿಶ್ವಾಸವಿದೆ ಎಂದು ಡೆಹ್ರಾಡೂನ್ ಡಿಐಜಿ ಅರುಣ್ ಮೋಹನ್ ಜೋಷಿಯವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com