ಸುಶಾಂತ್ ಸಿಂಗ್ ಪ್ರಕರಣ: ಬಿಹಾರದಿಂದ ಬಂದ ಪೊಲೀಸ್ ಅಧಿಕಾರಿಗೆ ಮುಂಬೈಯಲ್ಲಿ ಕ್ವಾರಂಟೈನ್ ಶಿಕ್ಷೆ; ಬಿಹಾರ v/s ಮುಂಬೈ ಪೊಲೀಸರ ಜಿದ್ದಾಜಿದ್ದಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸಲು ಮುಂಬೈಗೆ ಹೋದ ಪಾಟ್ನಾ ಎಸ್ಪಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಗೊಳಪಡಿಸಿರುವ ಬಗ್ಗೆ ಮುಂಬೈ ಮತ್ತು ಬಿಹಾರ ಪೊಲೀಸರ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಕ್ರಮ ಸರಿಯಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಪೊಲೀಸ್ ಕಮಿಷನರ್ ಮತ್ತು ಮುಂಬೈಗೆ ಬಂದು ಕ್ವಾರಂಟೈನ್ ಗೆ ಒಳಗಾದ ಪೊಲೀಸ್ ಅಧಿಕಾರಿ
ಮುಂಬೈ ಪೊಲೀಸ್ ಕಮಿಷನರ್ ಮತ್ತು ಮುಂಬೈಗೆ ಬಂದು ಕ್ವಾರಂಟೈನ್ ಗೆ ಒಳಗಾದ ಪೊಲೀಸ್ ಅಧಿಕಾರಿ

ಪಾಟ್ನಾ/ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸಲು ಮುಂಬೈಗೆ ಹೋದ ಪಾಟ್ನಾ ಎಸ್ಪಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಗೊಳಪಡಿಸಿರುವ ಬಗ್ಗೆ ಮುಂಬೈ ಮತ್ತು ಬಿಹಾರ ಪೊಲೀಸರ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಕ್ರಮ ಸರಿಯಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಪಾಟ್ನಾದಲ್ಲಿ ಇಂದು ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ತಿವಾರಿಯವರಿಗೆ ಎದುರಾದ ಪರಿಸ್ಥಿತಿ ಸರಿಯಲ್ಲ ಎಂದಿದ್ದಾರೆ. ಬಿಹಾರ ಪೊಲೀಸರು ತಮ್ಮ ಕಾನೂನಿನ ಕರ್ತವ್ಯ ಮಾಡುತ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಮ್ಮ ಡಿಜಿಪಿಗೆ ಮಹಾರಾಷ್ಟ್ರ ಪೊಲೀಸರ ಜೊತೆ ಮಾತುಕತೆ ನಡೆಸಲು ಹೇಳಲಾಗಿತ್ತು ಎಂದು ಹೇಳಿದರು.

ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ತನಿಖೆ ನಡೆಸಲು ಬಿಹಾರದಿಂದ ಬಂದಿದ್ದ ಐಪಿಎಸ್ ಅಧಿಕಾರಿಯನ್ನು ಬೃಹನ್ ಮುಂಬೈ ಪಾಲಿಕೆ ಅಧಿಕಾರಿಗಳು ಕ್ವಾರಂಟೈನ್ ಗೊಳಪಡಿಸಿರುವ ಕ್ರಮವನ್ನು ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪೊಲೀಸ್ ಅಧಿಕಾರಿಗಳು ಖಂಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಯು ನಾಯಕರು ಆರೋಪಿಸಿದ್ದಾರೆ.

ಮುಂಬೈ ಪೊಲೀಸರು ಹೇಳುವುದೇನು?:ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಇದುವರೆಗೆ 56 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅವರ ಮೇಲೆ ವೃತ್ತಿಪರ ವೈಷಮ್ಯವಿತ್ತೇ, ಹಣಕಾಸು ವ್ಯವಹಾರಗಳು ಅಥವಾ ಆರೋಗ್ಯ ಸಂಬಂಧಿ ವಿಷಯಗಳು ಸಾವಿಗೆ ಕಾರಣವಾಗಿತ್ತೆ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಮುಂಬೈ ಮಹಾನಗರ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಅವರಿಗೆ ದ್ವಿವ್ಯಕ್ತಿತ್ವದ ಸಮಸ್ಯೆಯಿತ್ತು, ಅದಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಅವರ ಸಾವಿಗೆ ಕಾರಣವಾದ ಅಂಶಗಳು ಯಾವುದು, ಯಾವ ಪರಿಸ್ಥಿತಿ ಅವರನ್ನು ಸಾವಿಗೆ ತಳ್ಳಿತು ಎಂಬ ನಿಟ್ಟಿನಲ್ಲಿ ನಮ್ಮ ತನಿಖೆ ಮುಂದುವರಿದಿದೆ ಎಂದಿದ್ದಾರೆ.

ಸುಶಾಂತ್ ಅವರ ತಂದೆ, ಸೋದರಿ ಮತ್ತು ಬಾವನವರ ಹೇಳಿಕೆಗಳನ್ನು ಜೂನ್ 16ರಂದು ದಾಖಲಿಸಿಕೊಳ್ಳಲಾಗಿತ್ತು. ಇಲ್ಲಿಯವರೆಗೆ ನಮ್ಮ ತನಿಖೆ ಬಗ್ಗೆ ಅವರು ಯಾವುದೇ ಸಂಶಯ, ಆಕ್ಷೇಪವೆತ್ತಿಲ್ಲ, ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಯನ್ನು ಹಲವು ಬಾರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಿಕೊಳ್ಳಲಾಗಿತ್ತು ಮತ್ತು ಆಕೆಯ ಹೇಳಿಕೆಯನ್ನು ಎರಡು ಬಾರಿ ದಾಖಲಿಸಿಕೊಳ್ಳಲಾಗಿದೆ. ಈಗ ಆಕೆ ಎಲ್ಲಿದ್ದಾರೆ ಎಂದು ನಾನು ಬಹಿರಂಗಪಡಿಸಲು ಹೋಗುವುದಿಲ್ಲ ಎಂದಿದ್ದಾರೆ.

ಸುಶಾಂತ್ ಖಾತೆಯಿಂದ 15 ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂದು ಅವರ ಕುಟುಂಬಸ್ಥರು ಪಾಟ್ನಾದಲ್ಲಿ ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾರೆ. ನಾವು ತನಿಖೆ ಮಾಡಿದ ವೇಳೆ ಆತನ ಖಾತೆಯಲ್ಲಿ 18 ಕೋಟಿ ರೂಪಾಯಿ ಪತ್ತೆಯಾಗಿದ್ದು ಅದರಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಇನ್ನೂ ಇದೆ. ರಿಯಾ ಚಕ್ರವರ್ತಿಗೆ ಇದುವರೆಗೆ ನೇರವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಗಳಿಲ್ಲ, ಆದರೂ ನಾವು ಕೂಲಂಕಷವಾಗಿ ತನಿಖೆ ಮಾಡುತ್ತೇವೆ ಎಂದರು.

ತನಿಖೆ ವೇಳೆ ಯಾವುದೇ ರಾಜಕೀಯ ನಾಯಕರ ಹೆಸರು ಪ್ರಸ್ತಾಪವಾಗಿಲ್ಲ. .ಯಾವುದೇ ಪಕ್ಷಗಳ ರಾಜಕಾರಣಿಗಳ ವಿರುದ್ಧ ಸಾಕ್ಷಿಗಳಿಲ್ಲ. ಇನ್ನು ಬಿಹಾರ ಪೊಲೀಸರಿಗೆ ನಾವು ಸಹಕಾರ ನೀಡುತ್ತಿಲ್ಲ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಈ ಕೇಸಿನ ವಿಚಾರಣೆ ಅವರ ವ್ಯಾಪ್ತಿಗೆ ಬರುತ್ತದೆಯೇ ಎಂದು ನೋಡುತ್ತೇವೆ. ತಮ್ಮ ವ್ಯಾಪ್ತಿಗೆ ತನಿಖೆ ಒಳಪಡುತ್ತದೆ ಎಂಬುದನ್ನು ಬಿಹಾರ ಪೊಲೀಸರು ಸಾಬೀತುಪಡಿಸಬೇಕು ಎಂದು ಮುಂಬೈ ಮಹಾನಗರ ಪೊಲೀಸ್ ಆಯುಕ್ತರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com