ಬಡತನಕ್ಕೆ ಸವಾಲ್ ಹಾಕಿ ದೃಷ್ಟಿ ದೋಷವಿದ್ದರೂ ಐಎಎಸ್ ಆದ ಮಹಾರಾಷ್ಟ್ರ ಯುವಕ!

ಬಡತನಕ್ಕೆ ಸೆಡ್ಡು ಹೊಡೆದ ಮಹಾರಾಷ್ಟ್ರ ಮೂಲದ ಯುವಕನೊಬ್ಬ ದೃಷ್ಟಿ ದೋಷವಿದ್ದರೂ ಯುಪಿಎಸ್'ಯಲ್ಲಿ 143ನೇ ರ್ಯಾಂಕ್ ಪಡೆದು ಇತರರಿಗೆ ಪ್ರೇರಣೆಯಾಗಿದ್ದಾರೆ. 
ಜಯಂತ್ ಮಂಕಲೆ
ಜಯಂತ್ ಮಂಕಲೆ

ಮುಂಬೈ: ಬಡತನಕ್ಕೆ ಸೆಡ್ಡು ಹೊಡೆದ ಮಹಾರಾಷ್ಟ್ರ ಮೂಲದ ಯುವಕನೊಬ್ಬ ದೃಷ್ಟಿ ದೋಷವಿದ್ದರೂ ಯುಪಿಎಸ್'ಯಲ್ಲಿ 143ನೇ ರ್ಯಾಂಕ್ ಪಡೆದು ಇತರರಿಗೆ ಪ್ರೇರಣೆಯಾಗಿದ್ದಾರೆ. 

ಮಹಾರಾಷ್ಟ್ರದ ಬೀಡ್ ನಗರದ ನಿವಾಸಿಯಾಗಿರುವ ಜಯಂತ್ ಮಂಕಲೆ (27)ಯವರು ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019ನೇ ಸಾಲಿನ ಕೇಂದ್ರ ನಾಗರೀಕ ಸೇವೆಗಳ ಪರೀಕ್ಷೆಯಲ್ಲಿ 143ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. 

ಸಂಗಮ್ನರ್‌ನ ಅಮೃತ್ವಾಹಿಣಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ 27 ವರ್ಷದ ಮಂಕಲೆಯವರು ಖಾಸಗಿ ಸಂಸ್ಥೆಯೊಂದರಲ್ಲಿ ನಿರ್ವಹಣಾ ಎಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವಾಟರ್ ಪಂಪ್ ಆಪರೇಟರ್ ಆಗಿದ್ದ ಇವರ ತಂದೆ ಮಂಕಲೆ 10 ವರ್ಷದ ಬಾಲಕನಾಗಿರುವಾಗಲೇ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದರು. 

ಮಂಕಲೆಯವರಿಗೆ ಇಬ್ಬರು ಸಹೋದರಿಯರಿದ್ದು, ತಂದೆ ತೀರಿಕೊಂಡ ಬಳಿಕ ಇಬ್ಬರು ಸಹೋದರಿಯರು ಹಾಗೂ ತಾಯಿಯ ಜವಾಬ್ದಾರಿ ಇವರ ಮೇಲಿತ್ತು. 

ಮಂಕಲೆಯವರು ಅಪರೂಪದ ಅನುವಂಶಿಕ ಕಾಯಿಲೆಯಾಗಿರುವ ರೆಟಿನೈಟಿಸ್ ಪಿಗ್ಮೆಂಟೋಸಾ (ರೆಟಿನಾದಲ್ಲಿನ ಕೋಶಗಳ ಕಾರ್ಯ ಸ್ಥಗಿತಗೊಳಿಸುತ್ತದೆ)ದಿಂದ ಬಳಲುತ್ತಿದ್ದು, ಶೇ.75ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ. ತಮ್ಮ ದೃಷ್ಟಿ ದೋಷವನ್ನು ದೊಡ್ಡ ಸಮಸ್ಯೆ ಎಂದುಕೊಳ್ಳದ ಮಂಕಲೆಯವರು ಐಎಎಸ್ ಆಗುವ ತಮ್ಮ ಕನಸು ನನಸು ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ಶಿಕ್ಷಕರು ಹಾಗೂ ಸ್ನೇಹಿತರ ಸಹಾಯ ಪಡೆದುಕೊಂಡಿದ್ದಾರೆ. 

ತಂದೆ ತೀರಿಕೊಂಡ ಬಳಿಕ ಮಂಕಲೆಯವರಿಗೆ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಾಗಿತ್ತು. ತಂದೆಗೆ ಬರುತ್ತಿದ್ದ ಪಿಂಚಣಿ ಹಣದಿಂದ ಮನೆಯನ್ನು ನಿಭಾಯಿಸುತ್ತಿದ್ದರು. ಇವರ ತಾಯಿ ಕೂಡ ಉಪ್ಪಿನಕಾಯಿ ಮಾರುವ ಮೂಲಕ ಮಂಕಲೆಯವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. 

ನಾನು ಕಣ್ಣಿನ ಬೆಳಕನ್ನಷ್ಟೇ ಕಳೆದುಕೊಂಡಿದ್ದೇನೆ. ಜೀವನದ ಬೆಳಕನ್ನಲ್ಲ. 2015ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ನನ್ನ ಕಣ್ಣಿನ ದೃಷ್ಟಿಯನ್ನು ಶೇ.75ರಷ್ಟು ಕಳೆದುಕೊಂಡಿದ್ದೆ. ಇದಾದ ಬಳಿಕ ನನ್ನ ಜೀವನ ಸಂಪೂರ್ಣ ಕತ್ತಲೆಯಾಗಿದೆ ಎಂಬಂತಹ ಭಾಸವಾಗುತ್ತಿತ್ತು. ತಂದೆಯನ್ನು ಕಳೆದುಕೊಂಡಿದ್ದ ನನಗೆ ಜೀವನ ಬಹಳ ಕಷ್ಟಕರವೆನಿಸಿತ್ತು. ಆದರೆ, ಯುಪಿಎಸ್'ಸಿ ದೊಡ್ಡ ಭರವಸೆ ಹಾಗೂ ಹೊಸ ಜೀವನವನ್ನು ನೀಡಿತು. ದೈಹಿಕ ಹಾಗೂ ಆರ್ಥಿಕ ಸಮಸ್ಯೆಗಳ ನಡುವೆಯೂ ಹೊಸ ಜೀವನ ಸಾಧಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆಂದು ಮಂಕಲೆಯವರು ಹೇಳಿದ್ದಾರೆ. 

ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಆಡಿಯೋ ಬುಕ್ ಖರೀತಿ ಮಾಡಲು ನನಗೆ ಸಾಧ್ಯವಾಗಿರಲಿಲ್ಲ. ಟಿವಿಯಲ್ಲಿ ಬರುವ ಸುದ್ದಿ, ಆಲ್ ಇಂಡಿಯಾ ರೇಡಿಯೋದಲ್ಲಿ ಬರುತ್ತಿದ್ದ ಉಪನ್ಯಾಸಗಳು, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಕೇಳುತ್ತಿದ್ದೆ. ಇದು ನನಗೆ ಬಹಳಷ್ಟು ಸಹಾಯ ಮಾಡಿತು. ಇಲ್ಲದೆ, ಯೂಟ್ಯೂಬ್ ನಲ್ಲಿ ಸಾಕಷ್ಟು ಮರಾಠಿ ಸಾಹಿತಿಗಳ ಭಾಷಣಗಳನ್ನು ಕೇಳುತ್ತಿದ್ದೆ. ಯಶಸ್ಸು ಗಳಿಸಬೇಕೆಂದು ನಿರ್ಧರಿಸಿದರೆ, ನಮ್ಮ ದಾರಿಯಲ್ಲಿ ಯಾವುದೇ ಅಡೆತಡೆಗಳು ಬಂದರೂ ಅದನ್ನು ನಾವು ದಾಟಬಹುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com