ಲಖನೌಗೆ ಬಂದಿಳಿದ ಪ್ರಧಾನಿ ಮೋದಿ, ವಿಶೇಷ ಹೆಲಿಕಾಪ್ಟರ್ ನಲ್ಲಿ ಆಯೋಧ್ಯೆಯತ್ತ ಪಯಣ

ಅಯೋಧ್ಯೆ ಶ್ರೀರಾಮಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಲಖನೌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಲಖನೌ: ಅಯೋಧ್ಯೆ ಶ್ರೀರಾಮಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಲಖನೌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಲಖನೌ ವಿಮಾನ ನಿಲ್ದಾಣದ ಮೂಲಕ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಹೆಲಿಕಾಪ್ಟರ್ ನಲ್ಲಿ ನೇರವಾಗಿ ಅಯೋಧ್ಯೆಗೆ ತೆರಳಲಿದ್ದು, ಇಲ್ಲಿ ಶ್ರೀರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ದೆಹಲಿಯಿಂದ ಲಖನೌಗೆ ಆಗಮಿಸಿರುವ ಪ್ರಧಾನಿ ಮೋದಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲು ಚಿನ್ನದ ಬಣ್ಣದ ಕುರ್ತಾ ಮತ್ತು ಪಂಚೆ ತೊಟ್ಟಿದ್ದಾರೆ. 

ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಸುಮಾರು 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಶಿಲಾನ್ಯಾಸಕ್ಕೆ ಇಟ್ಟು ಪೂಜೆ ಮಾಡಲಿದ್ದಾರೆ.  

ಬೆಳಗ್ಗೆ 11.30ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮಿಸಲಿದ್ದಾರೆ. ಬಳಿಕ 11.45ಕ್ಕೆ ಹನುಮಾನ್​ಗಡಿಯಲ್ಲಿ ಪ್ರಾರ್ಥನೆ ಸಲ್ಲಿಸಲ್ಲಿದ್ದು, ಹನುಮಾನ್ ಪೂಜೆ ಬಳಿಕ ಸರಯೂ ನದಿಗೆ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಆಗಮಿಸುವ ಪ್ರಧಾನಿ ಮೋದಿ, 12.30ಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಲಿರುವ ಮೋದಿ, ತಮ್ಮೊಂದಿಗೆ ತಂದಿರುವ 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಇಟ್ಟು ಪೂಜೆ ಮಾಡಲಿದ್ದಾರೆ. ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ 1.10ಕ್ಕೆ ರಾಮಜನ್ಮಭೂಮಿ ಸಂಕೀರ್ಣವನ್ನು ವೀಕ್ಷಿಸಲಿದ್ದಾರೆ. ಈ ವೇಳೆ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ‌ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮತ್ತಿತರ ಜೊತೆ ಸಮಾಲೋಚನೆ ನಡೆಸಲಿದ್ದು, ಬಳಿಕ ಮಧ್ಯಾಹ್ನ 02:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಖನೌಗೆ ಆಗಮಿಸಿ ಅಲ್ಲಿಂದ ದೆಹಲಿಗೆ ವಾಪಸ್ ಆಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com