ಸುಶಾಂತ್ ಸಾವು ಪ್ರಕರಣ: ವಿಚಾರಣೆ ಮುಂದೂಡುವಂತೆ ಪ್ರೇಯಸಿ ರಿಯಾ ಮಾಡಿದ್ದ ಮನವಿ ತಿರಸ್ಕರಿಸಿದ ಇಡಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನಿಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಅರ್ಜಿಯ ಇತ್ಯರ್ಥವಾಗುವವರೆಗೂ ತಮ್ಮ ವಿಚಾರಣೆಯನ್ನು ಮುಂದೂಡಿಕೆ ಮಾಡುವಂತೆ ರಿಯಾ ಇಡಿಗೆ ತಮ್ಮ ವಕೀಲರ ಮೂಲಕ ಮನವಿ ಮಾಡಿದ್ದರು. ಈ ಮನವಿಯನ್ನು ಇಡಿ ಅಧಿಕಾರಿಗಳು ತಿರಸ್ಕರಿಸಿದ್ದು, ರಿಯಾ ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ರಿಯಾ ಪರ ವಕೀಲರು, ರಿಯಾ ತಮ್ಮ ಹೇಳಿಕೆ ದಾಖಲಿಸುವ ಪ್ರಕ್ರಿಯೆನ್ನು ಮುಂದೂಡಿಕೆ ಮಾಡುವಂತೆ ಕೋರಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಅವರ ಅರ್ಜಿ ವಿಚಾರಣೆ ಬಾಕಿ ಇದ್ದು, ಇದರ ಅತ್ಯರ್ಥವಾಗುವವರೆಗೂ ವಿಚಾರಣೆ ಮುಂದೂಡುವಂತೆ  ಕೇಳಿದ್ದರು. ಆದರೆ ಇಡಿ ಅಧಿಕಾರಿಗಳು ಇದನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಪ್ರೇಯಸಿ ಆಗಿದ್ದ ರಿಯಾ ಸುಶಾಂತ್ ಸಿಂಗ್ ಗೆ ಮಾನಸಿಕ ಕಿರುಕುಳ ನೀಡಿದ್ದರು. ಹೀಗಾಗಿ ಆತ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಸುಶಾಂತ್ ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಬಿಹಾರ ಮತ್ತು ಮುಂಬೈ ನಲ್ಲಿ ದೂರು ದಾಖಲಾಗಿದೆ. ಈಗಾಗಲೇ ಬಿಹಾರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ್ದು, ಇದರ ವಿಚಾರಣೆ ಕೂಡ ಚಾಲ್ತಿಯಲ್ಲಿದೆ.

ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದ ರಿಯಾ!
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ವಾರದ ಮೊದಲು ರಿಯಾ ತಾವು ಸುಶಾಂತ್ ಜೊತೆ ವಾಸವಿದ್ದ ಫ್ಲ್ಯಾಟ್‌ ಅನ್ನು ತೊರೆದು ಹೋಗಿದ್ದರು. ಆ ದಿನವೇ ರಿಯಾ ಸುಶಾಂತ್ ಮೊಬೈಲ್‌ ನಂಬರ ಅನ್ನು ಬ್ಲಾಕ್ ಮಾಡಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಅಲ್ಲದೇ ಸುಶಾಂತ್ ಕಾಲ್ ರೆಕಾರ್ಡ್‌ನ ‌ಮಾಹಿತಿಯ ಪ್ರಕಾರವೂ ಜೂನ್‌ 8 ರಿಂದ ಜೂನ್‌ 14ರವರೆಗೆ ಸುಶಾಂತ್ ಹಾಗೂ ರಿಯಾ ಮೊಬೈಲ್ ಮೂಲಕ ಯಾವುದೇ ಮಾತುಕತೆ ನಡೆಸಿಲ್ಲ. ಜೂನ್ 14 ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೂನ್ 8 ರಂದು ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು.  ಸುಶಾಂತ್ ನಂಬರ್ ಅನ್ನು ರಿಯಾ ಯಾವ ಕಾರಣಕ್ಕೆ ಬ್ಲಾಕ್‌ ಮಾಡಿದ್ದಾರೆ, ಆಕೆ ಸುಶಾಂತ್‌ರನ್ನು ಬಿಟ್ಟು ಹೋಗಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com