ಕಲ್ಲಿಕೋಟೆ ವಿಮಾನ ದುರಂತ: 1990ರಲ್ಲೇ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಪೈಲಟ್ ದೀಪಕ್ ಸಾಥೆ

ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಪೈಲಟ್ ದೀಪಕ್ ಸಾಥೆ 1990ರಲ್ಲೇ ವಿಮಾನ ದುರಂತದಲ್ಲಿ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು.
ಪೈಲಟ್ ದೀಪಕ್ ವಸಂತ್ ಸಾಥೆ
ಪೈಲಟ್ ದೀಪಕ್ ವಸಂತ್ ಸಾಥೆ

ಮುಂಬೈ: ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಹಿರಿಯ ಪೈಲಟ್ ದೀಪಕ್ ಸಾಥೆ 1990ರಲ್ಲೇ ವಿಮಾನ ದುರಂತದಲ್ಲಿ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು.

ಕೇರಳದ ಕೋಳಿಕ್ಕೋಡ್‌ ನ ವಿಮಾನ ನಿಲ್ದಾಣದ ರನ್‌ವೇ ಯಲ್ಲಿ ಇಳಿಯುತ್ತಿದ್ದಾಗ ಜಾರಿ ಕಣಿವೆಗೆ ಬಿದ್ದು ಇಬ್ಭಾಗವಾಗಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ವಿಮಾನದ ಹಿರಿಯ ಪೈಲಟ್ ವಿಂಗ್ ಕಮಾಂಡರ್ ದೀಪಕ್ ವಸಂತ್ ಸಾಥೆ ಹಾಗೂ ಕ್ಯಾಪ್ಟನ್ ಅಖಿಲೇಶ್ ಕುಮಾರ್ ಕೂಡ ಸೇರಿದ್ದಾರೆ.

ವಿಂಗ್ ಕಮಾಂಡರ್ ದೀಪಕ್ ವಿ. ಸಾಥೆ ಭಾರತೀಯ ವಾಯು ಪಡೆಯ ಮಾಜಿ ಫೈಟರ್ ಜೆಟ್ ಪೈಲಟ್ ಆಗಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ್ನು ಚಲಾಯಿಸುವ ಮೊದಲು ಅವರು ಏರ್ ಇಂಡಿಯಾ ವಿಮಾನಗಳನ್ನು ಹಾರಿಸುತ್ತಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡಮಿಯ(ಎನ್‌ಡಿಎ) ಹಳೆ ವಿದ್ಯಾರ್ಥಿಯಾಗಿರುವ ದೀಪಕ್ ಸಾಥೆ ಅವರು ಬೋಯಿಂಗ್ 737 ವಿಮಾನಗಳನ್ನು ಹಾರಿಸುವುದರಲ್ಲಿ ಬಹಳ ಅನುಭವ ಹೊಂದಿದ್ದರು.  ಕ್ಯಾಪ್ಟನ್ ದೀಪಕ್ ವಿ. ಸಾಥೆ ಎನ್‌ಡಿಎನ 58ನೇ ಕೋರ್ಸ್‌ ಪ್ರಶಸ್ತಿ ಪುರಸ್ಕೃತರಾಗಿದ್ದು, ಅವರು ಜೂಲಿಯೆಟ್ ಸ್ಕ್ವಾಡ್ರನ್‌ ಗೆ ಸೇರಿದವರಾಗಿದ್ದರು ಅಲ್ಲದೆ ಸ್ವರ್ಡ್ ಆಫ್ ಹಾನರ್ ಗೌರವಕ್ಕೂ ಪಾತ್ರರಾಗಿದ್ದರು ಎಂದು ಏರ್ ಮಾರ್ಷಲ್ ಭೂಷಣ್ ಗೋಖಲೆ(ನಿವೃತ್ತ) ಮಾಹಿತಿ ನೀಡಿದ್ದಾರೆ. 

ದೀಪಕ್ ಅವರು ಜೂನ್ 1981ರಲ್ಲಿ ಹೈದರಾಬಾದ್‌ನ ವಾಯುಪಡೆಯ ಅಕಾಡಮಿಯಿಂದ ಸ್ವಾರ್ಡ್ ಆಫ್ ಹಾನರ್‌ನಿಂದ ಉತ್ತೀರ್ಣರಾಗಿದ್ದರು. ಅವರು ಅತ್ಯುತ್ತಮ ಸ್ಕ್ವ್ಯಾಷ್ ಆಟಗಾರ ಕೂಡ ಆಗಿದ್ದರು.  ದೀಪಕ್ ಅವರು ತುಂಬಾ ವೃತ್ತಿಪರರಾಗಿದ್ದರು ಹಾಗೂ 58 ಎನ್‌ಡಿಎ ಅಧ್ಯಕ್ಷ ಚಿನ್ನದ ಪದಕವನ್ನು ಪಡೆದಿದ್ದರು. ಅವರು ವಾಯುಪಡೆಗೆ ಪರೀಕ್ಷಾ ಪೈಲಟ್ ಆಗಿದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ವಾಯುಸೇನೆಯಿಂದ ನಿವೃತ್ತಿಯಾದ ಬಳಿಕ ದೀಪಕ್ ಸಾಥೆ ವಾಣಿಜ್ಯ ಪೈಲಟ್ ಆಗಲು ನಿರ್ಧರಿಸಿದ್ದರು. ಅದರಂತೆ ಏರ್ ಇಂಡಿಯಾ ಸಂಸ್ಥೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. 

1990ರಲ್ಲೇ ವಿಮಾನ ದುರಂತದಲ್ಲಿ ಬದುಕುಳಿದಿದ್ದ ದೀಪಕ್ ಸಾಥೆ
ಕಲ್ಲಿಕೋಟೆಯಲ್ಲಿ ದುರಂತ ಸಾವಿಗೀಡಾಗುವ ಮುನ್ನ 1990ರಲ್ಲೇ ದೀಪಕ್ ಸಾಥೆ ಅವರು ವಿಮಾನ ದುರಂತದಲ್ಲಿ ಚಮತ್ಕಾರಿ ರೀತಿಯಲ್ಲಿ ಬದುಕುಳಿದಿದ್ದರು. ಅಂದು ನಡೆದ ಭೀಕರ ಅಪಘಾತದಲ್ಲಿ ದೀಪಕ್ ಸಾಥೆ ಬರೊಬ್ಬರಿ 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ದೇಹಕ್ಕೆ ಸಾಕಷ್ಟು ಗಾಯಗಳಾಗಿತ್ತು. ಅಪಘಾತದಲ್ಲಿ ಅವರ ತಲೆ ಬುರುಡೆಗೂ ಗಾಯವಾಗಿತ್ತು. ನಾವು ಯಾರೂ ಅವರು ಮತ್ತೆ ವಿಮಾನ ಚಲಾಯಿಸುತ್ತಾರೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಅವರ ಬಲಿಷ್ಠ ಇಚ್ಛಾಶಕ್ತಿ ಮತ್ತು ತಮ್ಮ ಕೆಲಸ ಮೇಲಿನ ಪ್ರೀತಿಯಿಂದಾಗಿ ಅವರನ್ನು ಅದನ್ನು ಗೆದ್ದು ಬಂದಿದ್ದರು ಎಂದು ಅವರ ಸಹೋದರ ಸಂಬಂಧಿ ನಿಲೇಶ್ ಸಾಥೆ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಇನ್ನು ನಿಲೇಶ್ ಅವರು ಹೇಳಿರುವಂತೆ ದೀಪಕ್ ಸಾಥೆ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇಬ್ಬರು ಪುತ್ರರೂ ಕೂಡ ಐಐಟಿ ಬಾಂಬೆಯಿಂದ ಪದವಿ ಪಡೆದಿದ್ದಾರೆ. ಸಾಥೆ ಅವರ ತಂದೆ ವಸಂತ್ ಸಾಥೆ ಅವರು ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಅವರು ಅವರ ಪತ್ನಿಯೊಂದಿಗೆ ನಾಗ್ಪುರದಲ್ಲಿದ್ದಾರೆ. ಸಾಥೆ ಅವರ ಸಹೋದರ ವಿಕಾಸ್ ಕೂಡ ಸೇನಾ ಯೋಧನಾಗಿದ್ದು, ಜಮ್ಮುವಿನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು ಎಂದು ನಿಲೇಶ್ ಮಾಹಿತಿ ನೀಡಿದ್ದಾರೆ.  

'ದೀಪಕ್ ಸಾಥೆ ಅವರು ವಿಮಾನಯಾನ ಕ್ಷೇತ್ರದಲ್ಲಿ ಸುಧೀರ್ಘ 36 ವರ್ಷ ಸೇವೆ ಸಲ್ಲಿಸಿದ್ದರು. ಈ ಪೈಕಿ 21 ವರ್ಷ ಏರ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಅವರು ವಾಣಿಜ್ಯ ವಿಮಾನದ ಪೈಲಟ್ ಆಗಿ ಸೇವೆ ಆರಂಭಿಸಿದ್ದರು. ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ವಂದೇ ಭಾರತ್ ಮಿಷನ್ ಕುರಿತಂತೆ ನನ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಅವರು ಈ ಕೆಲಸ ಮಾಡಲು ತುಂಬಾ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದರು. ವಿದೇಶದಲ್ಲಿರುವ ನಮ್ಮ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಅವರು ಉತ್ಸುಕರಾಗಿದ್ದರು. ಈ ಬಗ್ಗೆ ನಾನು ನೀವು ಖಾಲಿ ವಿಮಾನ ತೆಗೆದುಕೊಂಡು ಹೋಗುತ್ತೀರಾ.. ಆ ದೇಶಗಳು ಯಾವುದೇ ಪ್ರಯಾಣಿಕರಿಗೆ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಇಲ್ಲ ನಮ್ಮ ವಿಮಾನ ಖಾಲಿ ಹೋಗುವುದಿಲ್ಲ. ನಾವು ತೆರಳುವ ದೇಶಗಳಿಗೆ ವೈದ್ಯಕೀಯ ಪರಿಕರಗಳು, ಔಷಧಿಗಳು, ಹಣ್ಣು ಮತ್ತು ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತೇವೆ. ನಮ್ಮ ದೇಶದಿಂದ ಈ ದೇಶಗಳಿಗೆ ನಮ್ಮ ವಿಮಾನ ಎಂದಿಗೂ ಖಾಲಿಯಾಗಿ ಹೋಗುವುದಿಲ್ಲ ಎಂದು ಹೇಳಿದ್ದರು. ಇದು ನನ್ನ ಮತ್ತು ದೀಪಕ್ ಸಾಥೆ ನಡುವಿನ ಕೊನೆಯ ಸಂಭಾಷಣೆಯಾಗಿತ್ತು ಎಂದು ನಿಲೇಶ್ ಸಾಥೆ ಭಾವುಕರಾಗಿದ್ದಾರೆ.

ನಿಲೇಶ್ ಸಾಥೆ ಅವರೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

Related Article

ಕಲ್ಲಿಕೋಟೆ ವಿಮಾನ ದುರಂತದ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ: ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ

ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷತೆಯ ಲೋಪದೋಷ: ಕಳೆದ ಜುಲೈನಲ್ಲಿ ಶೋಕಾಸ್ ನೊಟೀಸ್ ನೀಡಿದ್ದ ಡಿಜಿಸಿಎ!

ಕೇರಳದಲ್ಲಿ ಏರ್ ಇಂಡಿಯಾ ದುರಂತ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆ, ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ ವಶಕ್ಕೆ

ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ: ಸಹಾಯಕ್ಕೆ ದೆಹಲಿ, ಮುಂಬೈಯಿಂದ ವಿಶೇಷ ವಿಮಾನ

ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತ: ಐಎಎಫ್ ನಲ್ಲಿ ಬೆಸ್ಟ್ ಪೈಲಟ್ ಆಗಿದ್ದರು ಮೃತ ಪೈಲಟ್ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ!

ಕೇರಳದ ಕಲ್ಲಿಕೋಟೆಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತ:ಮೃತರ ಸಂಖ್ಯೆ 19ಕ್ಕೇರಿಕೆ, ಹಲವರ ಸ್ಥಿತಿ ಗಂಭೀರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com