ಉಗ್ರರ ದಾಳಿ ಭೀತಿ: ಪಕ್ಷ ತೊರೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಎಂಎಲ್'ಸಿ ಯೂಸುಫ್ ಸಲಹೆ

ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಉಗ್ರರು ಗುರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ತೊರೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಎಂಎಲ್'ಸಿ ಸೋಫಿ ಯೂಸುಫ್ ಅವರು ಸಲಹೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಉಗ್ರರು ಗುರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ತೊರೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಎಂಎಲ್'ಸಿ ಸೋಫಿ ಯೂಸುಫ್ ಅವರು ಸಲಹೆ ನೀಡಿದ್ದಾರೆ. 

ಕಾಶ್ಮೀರದಲ್ಲಿ ಆಗಸ್ಟ್ 4 ರಿಂದಲೂ ಈ ವರೆಗೂ ಬಿಜೆಪಿ ಕಾರ್ಯಕರ್ತರ ಮೇಲೆ ಉಗ್ರರು ಮೂರು ಬಾರಿ ದಾಳಿ ನಡೆಸಿದ್ದು, ಸರ್ಪಂಚ್ ಒಬ್ಬರನ್ನು ಹತ್ಯೆ ಮಾಡಿದ್ದಾರೆ. 

ಇದಲ್ಲದೆ, ನಿನ್ನೆ ಕೂಡ ಬುದ್ಗಾಂನಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ನಝರ್ ಅವರ ನಿವಾಸದ ಮೇಲೂ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಝರ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 

ದಾಳಿ ಬಳಿಕ ನಾಲ್ವರು ಬಿಜೆಪಿ ನಾಯಕರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಈ ವರೆಗೂ 15ಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ. 

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಯೂಸುಫ್ ಅವರು, ಬಿಜೆಪಿ ಕಾರ್ಯಕರ್ತರು ಭೀತಿಗೊಳಗಾಗಿದ್ದು, ಅಸುರಕ್ಷಿತ ಭಾವನೆಗಳು ಮೂಡತೊಡಗಿವೆ. ಮತ್ತಷ್ಟು ಕಾರ್ಯಕರ್ತರು ರಾಜೀನಾಮೆ ನೀಡಿದರೂ ಕೂಡ ಪಕ್ಷದಲ್ಲಿ ಯಾವುದೇ ವ್ಯತ್ಯಾಸಗಳಾಗುವುದಿಲ್ಲ. ಏನೇ ಆದರೂ ಪಕ್ಷದ ಕಾರ್ಯಕರ್ತರ ಸುರಕ್ಷತೆ ಅವರ ಜೀವ ಮುಖ್ಯ. ಹೀಗಾಗಿ ಪ್ರಸ್ತುತದ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ನಾನೇ ತಿಳಿಸಿದ್ದೇನೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಸೇರ್ಪಡೆಗೊಳ್ಳುವಂತೆ ಸಲಹೆ ನೀಡಿದ್ದೇನೆಂದು ತಿಳಿಸಿದ್ದಾರೆ. 

ನನ್ನ ಸುತ್ತಲೂ 10 ಮಂದಿ ಭದ್ರತಾ ಸಿಬ್ಬಂದಿಗಳಿದ್ದಾರೆ. ಆದರೆ, ಕಾರ್ಯಕರ್ತರಿಗೆ ಯಾವುದೇ ಭದ್ರತೆಗಳಿರುವುದಿಲ್ಲ. ಹೀಗಾಗಿ ಅವರ ಜೀವ, ಸುರಕ್ಷತೆಗೆ ಆದ್ಯತೆ ನೀಡಬೇಕಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com