ಬೆಂಗಳೂರು ಹಿಂಸಾಚಾರ: ಪ್ರಚೋದನಾಕಾರಿ ಪೋಸ್ಟ್ ಮೂಲ ಪತ್ತೆ ತನಿಖೆಗೆ ದಿಗ್ವಿಜಯ್ ಸಿಂಗ್ ಆಗ್ರಹ

ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಾಕಾರಿ ಪೋಸ್ಟ್'ನ ಮೂಲ ಪತ್ತೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಬುಧವಾರ ತನಿಖೆಗೆ ಆಗ್ರಹಿಸಿದ್ದಾರೆ. 
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ನವದೆಹಲಿ: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾದ ಪ್ರಚೋದನಾಕಾರಿ ಪೋಸ್ಟ್'ನ ಮೂಲ ಪತ್ತೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಬುಧವಾರ ತನಿಖೆಗೆ ಆಗ್ರಹಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪೋಸ್ಟ್'ಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತೇವೆ. ಪ್ರತೀಯೊಬ್ಬರು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತೇವೆ. ಪೋಸ್ಟ್ ಶೇರ್ ಮಾಡಿದವರನ್ನು ಬಿಟ್ಟು ಪೋಸ್ಟ್ ಮೊದಲು ಹಾಕಿದ್ದವರು ಯಾರು, ಆ ಪೋಸ್ಟ್ ಎಲ್ಲಿಂದ ಬಂದಿತು ಎಂಬ ಮೂಲ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಬೇಕೆಂದು ಹೇಳಿದ್ದಾರೆ. 

ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡಲಾಗಿದೆ ಎಂದು ನಿನ್ನೆ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಮುತ್ತಲಿನ ಮನೆಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೋಮಿಗೆ ಸೇರಿದ ಉದ್ರಿಕ್ತ ಗುಂಪು ದಾಂಧಲೆ ನಡೆಸಿ, ಸಿಕ್ಕಸಿಕ್ಕ ವಾಹನಗಳು, ಮನೆ-ಮಳಿಗೆಗಳಿಗೆ ಬೆಂಕಿ ಹಚ್ಚಿದ್ದರು. ಶಾಸಕರ ನಿವಾಹ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಈ ವೇಳೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು ಮಾರಾಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸಿದ್ದರು, ಅಲ್ಲದೆ, ಪಟಾಕಿಗಳನ್ನು ಸಿಡಿಸಿ ವಿಕೃತಿ ಮೆರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com