ನ್ಯಾಯಾಂಗ ನಿಂದನೆ ಟ್ವೀಟ್: ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು 

ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ತೀವ್ರ ಹಿನ್ನಡೆಯಾಗುವ ರೀತಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ನ್ಯಾಯಾಂಗ ವ್ಯವಸ್ಥೆ ವಿರುದ್ಧ ಅವರು ಮಾಡಿದ್ದ ಎರಡು ಟ್ವೀಟ್ ಗಳು ಅವರಿಗೆ ಮುಳುವಾಗಿದೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್
ಹಿರಿಯ ವಕೀಲ ಪ್ರಶಾಂತ್ ಭೂಷಣ್

ನವದೆಹಲಿ: ಹಿರಿಯ ನ್ಯಾಯವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರಿಗೆ ತೀವ್ರ ಹಿನ್ನಡೆಯಾಗುವ ರೀತಿ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ನ್ಯಾಯಾಂಗ ವ್ಯವಸ್ಥೆ ವಿರುದ್ಧ ಅವರು ಮಾಡಿದ್ದ ಎರಡು ಟ್ವೀಟ್ ಗಳು ಅವರಿಗೆ ಮುಳುವಾಗಿದೆ.

ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಮಾಡಿರುವ ಟ್ವೀಟ್ ನ್ಯಾಯಾಂಗ ನಿಂದನೆಯಾಗಿದೆ ಎಂದು ಇಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ ತಪ್ಪಿತಸ್ಥ ಎಂದು ಹೇಳಿದೆ. 

ಅವರಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಆಗಸ್ಟ್ 20ರಂದು ಪ್ರಕಟಿಸಲಿದೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. ಕ್ರಿಮಿನಲ್ ಕಾನೂನು ನಿಂದನೆಯಡಿ ಪ್ರಶಾಂತ್ ಭೂಷಣ್ ಗೆ 6 ತಿಂಗಳು ಜೈಲು ಶಿಕ್ಷೆ ಅಥವಾ 2 ಸಾವಿರ ರೂಪಾಯಿ ದಂಡ ಅಥವಾ ಜೈಲುವಾಸ ಮತ್ತು ದಂಡ ಎರಡನ್ನೂ ವಿಧಿಸಬಹುದು. 

ನ್ಯಾಯವಾದಿ ಪ್ರಶಾಂತ್ ಭೂಷಣ್ ಕಳೆದ ಜೂನ್ 27ರಂದು ಸುಪ್ರೀಂ ಕೋರ್ಟ್ ಬಗ್ಗೆ ಮತ್ತು ಜೂನ್ 29ರಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಬಗ್ಗೆ ಟ್ವೀಟ್ ಮಾಡಿದ್ದರು. ಅದು ವೈರಲ್ ಆಗಿ ನ್ಯಾಯಾಂಗ ನಿಂದನೆಯಾಗಿದೆ ಎಂದು ವ್ಯಾಪಕ ಟೀಕೆ ಬಂದ ನಂತರ ಎರಡೂ ಟ್ವೀಟ್ ಗಳನ್ನು ಟ್ವಿಟ್ಟರ್ ತೆಗೆದುಹಾಕಿತ್ತು. ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಗೆ ನ್ಯಾಯಾಂಗ ನಿಂದನೆ ಶೋಕಾಸ್ ನೊಟೀಸ್ ನೀಡಿತ್ತು. 

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮಾಡಿದ್ದ ಟ್ವೀಟ್ ಏನು?: ಮೊದಲ ಟ್ವೀಟ್ ನಲ್ಲಿ, ತುರ್ತು ಪರಿಸ್ಥಿತಿ ಹೇರದೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡಲಾಗಿದೆ ಎಂದು ಕಳೆದ ಆರು ವರ್ಷಗಳನ್ನು ಇತಿಹಾಸಕಾರರು ಹಿಂತಿರುಗಿ ನೋಡಿದರೆ, ನಾಶದಲ್ಲಿ ಸುಪ್ರೀಂ ಕೋರ್ಟ್ ನ ಪಾತ್ರವನ್ನು ಸ್ಪಷ್ಟವಾಗಿ ನೋಡಬಹುದು. ಅದರಲ್ಲೂ ಕಳೆದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರ ಇದರಲ್ಲಿ ಅತ್ಯಂತ ದೊಡ್ಡದಾಗಿದೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿಗಳನ್ನು ಪ್ರಶಾಂತ್ ಭೂಷಣ್ ಆರೋಪಿಸಿದ್ದರು.

ಮತ್ತೊಂದು ಟ್ವೀಟ್ ನಲ್ಲಿ, ನಾಗ್ಪುರದಲ್ಲಿ ರಾಜಭವನದಲ್ಲಿ ಬಿಜೆಪಿ ನಾಯಕನಿಗೆ ಸೇರಿದ 50 ಲಕ್ಷದ ಬೈಕ್ ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ್ದಾರೆ. ದೇಶದ ನಾಗರಿಕರ ಮೂಲಭೂತ ಹಕ್ಕಾದ ನ್ಯಾಯ ಸಿಗುವುದಕ್ಕೆ ಕೊರೋನಾ ಲಾಕ್ ಡೌನ್ ಎಂದು ಹೇಳಿಕೊಂಡು ಸುಪ್ರೀಂ ಕೋರ್ಟ್ ನ ಕಾರ್ಯಕಲಾಪಕ್ಕೆ ರಜೆ ಹಾಕಿ ಮುಖ್ಯ ನ್ಯಾಯಮೂರ್ತಿಗಳು ಬೈಕ್ ನಲ್ಲಿ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

ನಂತರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ಟಿನಲ್ಲಿ ನ್ಯಾಯವಾದಿ ಪ್ರಶಾಂತ್ ಭೂಷಣ್, ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಿಂದನಕಾರಿಯಾಗಿ ಹೇಳಿಕೆ ನೀಡಿದ್ದು ತಪ್ಪು. ಅವರು ಬೈಕ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ. ನಿಂತಿದ್ದ ಬೈಕ್ ಮೇಲೆ ಹೆಲ್ಮೆಟ್ ಧರಿಸದೆ ಕುಳಿತಿದ್ದರು, ಅದನ್ನು ನಾನು ಗಮನಿಸುವಲ್ಲಿ ವಿಫಲನಾಗಿದ್ದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. 

ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು 2009ರಲ್ಲಿ ತೆಹಲ್ಕಾ ಮ್ಯಾಗಜಿನ್ ಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶಾಂತ್ ಭೂಷಣ್ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ಕೂಡ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಿತ್ತು. 

ಟ್ವೀಟ್ ಗಳ ಬಗ್ಗೆ ಪ್ರಶಾಂತ್ ಭೂಷಣ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಕಳೆದ ಜುಲೈ 22ರಂದು ತಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ವಿಚಾರಣೆ ಏಕೆ ನಡೆಸಬಾರದು ಎಂದು ಕೇಳಿ ಶೋಕಾಸ್ ನೊಟೀಸ್ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com