ಸೀಮಾ ನಿರ್ಣಯ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ: ಪ್ರಧಾನಿ ಮೋದಿ

ಸೀಮಾ ನಿರ್ಣಯ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸೀಮಾ ನಿರ್ಣಯ ಕುರಿತ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

76ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಸೀಮಾ ನಿರ್ಣಯ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೂಡ ಮುಖ್ಯಮಂತ್ರಿ ಹಾಗೂ ಸಚಿವರನ್ನು ಪಡೆಯಲಿದೆ. ಇದಕ್ಕೆ ದೇಶ ಬದ್ಧವಾಗಿದೆ ಎಂದು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗಿದೆ. ಜಮ್ಮು ಕಾಶ್ಮೀರಲ್ಲಿ 370ನೇ ವಿಧಿ ನಿಷೇಧಿಸಿ ಒಂದು ವರ್ಷ ಕಳೆದಿದೆ. ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ, ಲಡಾಖ್ ಜನರ ಬಹು ವರ್ಷಗಳ ಕನಸನ್ನು ನಾವು ನನಸು ಮಾಡಿದ್ದೇವೆ, ಇನ್ನು ಅಭಿವೃದ್ಧಿಯ ಅವಶ್ಯಕತೆ ಇದೆ. ಈ ಒಂದು ವರ್ಷವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಪ್ರಯಾಣದ ಹೊಸ ವರ್ಷವಾಗಿದೆ. ಈ ಒಂದು ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರು ಮತ್ತು ದಲಿತರು ಹಕ್ಕು ಪಡೆದ ವರ್ಷವಾಗಿದೆ. ಈ ಒಂದು ವರ್ಷ ಜಮ್ಮು ಮತ್ತು ಕಾಶ್ಮೀರದ ನಿರಾಶ್ರಿತರಿಗೆ ಘನತೆಯಿಂದ ಜೀವನ ನಡೆಸಿದ ವರ್ಷವಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಗಾಲ್ವನ್ ನಲ್ಲಿ ಭಾರತ ಹಾಗೂ ಚೀನಾ ನಡುವೆ ನಡೆದ ಸಂಘರ್ಷ ಕುರಿತಂತೆ ಪರೋಕ್ಷವಾಗಿ ಚೀನಾಗೆ ತಿರುಗೇಟು ನೀಡಿರುವ ಪ್ರಧಾನಿ ಮೋದಿಯವರು, ಎಲ್‌ಎಸಿಯಿಂದ ಎಲ್‌ಒಸಿವರೆಗೆ ನಮ್ಮ ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಸೇನಾಪಡೆಗಳು ಉತ್ತಮ ಉತ್ತರ ನೀಡಿದ್ದಾರೆಂದು ತಿಳಿಸಿದ್ದಾರೆ. 

ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯಗಳಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ.  ಆತಂಕವಾದವಿರಲಿ, ವಿಸ್ತಾರವಾದವಿರಲಿ ಭಾರತವು ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com