ಇಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಕ್ಕಳು ಇಲ್ಲದಿರುವುದು ನೋವು ತಂದಿದೆ: ಪ್ರಧಾನಿ ಮೋದಿ
ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಒಪ್ಪವಾದ ಸಮವಸ್ತ್ರ ಧರಿಸಿ ತ್ರಿವರ್ಣದ ಬ್ಯಾಂಡ್ ತೊಟ್ಟು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ಶಾಲೆಗೆ ಲಗುಬಗೆಯಿಂದ ಹೋಗುತ್ತಾರೆ.
Published: 15th August 2020 08:24 AM | Last Updated: 15th August 2020 09:12 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಒಪ್ಪವಾದ ಸಮವಸ್ತ್ರ ಧರಿಸಿ ತ್ರಿವರ್ಣದ ಬ್ಯಾಂಡ್ ತೊಟ್ಟು ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡು ಶಾಲೆಗೆ ಲಗುಬಗೆಯಿಂದ ಹೋಗುತ್ತಾರೆ.
ಶಾಲೆಯಲ್ಲಿ ಮೈದಾನದಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಸಾಲಿನಲ್ಲಿ ನಿಂತು ಎನ್ ಸಿಸಿ ಕೆಡೆಟ್ ಗಳ ಪಥ ಸಂಚಲನ, ಬ್ಯಾಂಡ್, ಅತಿಥಿಗಳ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಖುಷಿಯಿಂದ ಗಂಟೆಗಟ್ಟಲೆ ಕುಳಿತು ನೋಡಿ, ಕೇಳಿ ರಾಷ್ಟ್ರಗೀತೆ ಹಾಡಿ, ಶಾಲೆಯಲ್ಲಿ ಕೊಟ್ಟ ಸಿಹಿ ತಿನಿಸು ತಿಂದು ಮನೆಗೆ ಹೋಗುತ್ತಾರೆ. ಹಲವು ಮಕ್ಕಳಿಗೆ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇರುತ್ತದೆ.
ಆದರೆ ಈ ಬಾರಿ ಕೊರೋನಾದಿಂದಾಗಿ ಸ್ವಾತಂತ್ರ್ಯೋತ್ಸವ ದಿನಾಚರಣೆ ದೇಶದೆಲ್ಲೆಡೆ ಬಹಳ ಸರಳವಾಗಿ ನೆರವೇರುತ್ತಿದೆ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಪ್ರಧಾನಿ ಭಾಷಣ ಮಾಡಿದ್ದಾರೆ. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳಿಗೆ, ಸಾರ್ವಜನಿಕರಿಗೆ ಕೆಂಪು ಕೋಟೆಗೆ ಪ್ರವೇಶವಿಲ್ಲ. ಮಕ್ಕಳ ಆಕರ್ಷಕ ಪ್ರದರ್ಶನ ರದ್ದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯವಿಲ್ಲ.
ಬದಲಾಗಿ ಇಂದು 500 ಪೊಲೀಸ್ ಸಿಬ್ಬಂದಿ ಸೇರಿದಂತೆ 1500 ಕೊರೋನಾ ವಾರಿಯರ್ಸ್ ಗಳನ್ನು ಕೆಂಪು ಕೋಟೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ವರ್ಷದ ಆಚರಣೆಗೆ ಮಕ್ಕಳು ಇಲ್ಲ ಎಂಬ ನೋವು ಪ್ರಧಾನಿ ಮೋದಿಯವರನ್ನೂ ಕಾಡಿದೆ. ತಮ್ಮ ಭಾಷಣದಲ್ಲಿ ಅದನ್ನು ಪ್ರಸ್ತಾಪಿಸಿದ್ದಾರೆ.
ಇಂದು ನಾವು ಕೋವಿಡ್-19 ಎಂಬ ಆರೋಗ್ಯ ಸಂಬಂಧಿ ವಿಚಿತ್ರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಇಲ್ಲಿ ಇಂದು ಮಕ್ಕಳನ್ನು ಕಾಣದಿರುವುದು ನನಗೆ ಸಹ ನೋವುಂಟುಮಾಡಿದೆ. ಇಡೀ ದೇಶದ ಪರವಾಗಿ ನಾನು ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಎಲ್ಲಾ ಆರೋಗ್ಯ ವಲಯ ಕಾರ್ಯಕರ್ತರು, ವೈದ್ಯರು, ನರ್ಸ್ ಗಳು ದೇಶಕ್ಕಾಗಿ, ಜನರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.