ನಾನು ರಾಜಕಾರಣಿಯಲ್ಲ, ಅಸ್ಸಾಂ ಬಿಜೆಪಿ ಸಿಎಂ ಅಭ್ಯರ್ಥಿಯೂ ಅಲ್ಲ: ನಿವೃತ್ತ ಸಿಜೆಐ ರಂಜನ್ ಗೊಗೊಯ್

ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಸ್ಪಷ್ಟನೆ ನೀಡಿದ್ದಾರೆ.
ರಂಜನ್ ಗೊಗೊಯ್
ರಂಜನ್ ಗೊಗೊಯ್

ನವದೆಹಲಿ: ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯ ವಿಚಾರವಾಗಿ ಎದ್ದಿರುವ ಊಹಾಪೋಹಗಳಿಗೆ ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಸ್ಪಷ್ಟನೆ ನೀಡಿದ್ದಾರೆ.

ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರಂಜನ್ ಗೊಗೊಯ್ ಅವರು, ನಾನು ರಾಜಕಾರಣಿ ಅಲ್ಲ. ಅಸ್ಸಾಂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೂ ಅಲ್ಲ ಮತ್ತು ನನಗೆ ಆ ಉದ್ದೇಶವೂ ಇಲ್ಲ. ಅಂತಹ ಸಾಧ್ಯತೆಗಳು ಇಲ್ಲ ಎಂದು ರಾಜ್ಯಸಭೆ ನಾಮನಿರ್ದೇಶಿತ ಸದಸ್ಯರಾಗಿರುವ ರಂಜನ್ ಗೊಗೊಯ್ ಅವರು  ಹೇಳಿದ್ದಾರೆ.

ಇದೇ ವೇಳೆ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವುದಕ್ಕೂ ಮತ್ತು ರಾಜಕೀಯ ಪಕ್ಷದಿಂದ ಚುನಾಯಿತನಾಗುವುದರ ನಡುವಿನ ವ್ಯತ್ಯಾಸವನ್ನು ಜನರು ಅರ್ಥ ಮಾಡಿಕೊಳ್ಳದಿರುವುದು ದುರದೃಷ್ಟಕರ ಎಂದು ಹೇಳಿರುವ ಗೊಗೊಯ್ ಅವರು, ನಾನು ಪ್ರಜ್ಞಾಪೂರ್ವಕವಾಗಿ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯನಾಗಿ  ಆಯ್ಕೆಯಾಗಿದ್ದೇನೆ. ಏಕೆಂದರೆ ಅದು ನನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡು ನನಗೆ ಆಸಕ್ತಿಯ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುತ್ತದೆ. ಇದು ಹೇಗೆ ನನ್ನನ್ನು ರಾಜಕಾರಣಿಯಾಗಿ ಮಾಡುತ್ತದೆ? ಎಂದು ರಂಜನ್ ಗೊಗೊಯ್ ಪ್ರಶ್ನಿಸಿದ್ದಾರೆ. 

ಮುಂದಿನ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ರಂಜನ್ ಗೊಗೊಯ್ ಅವರು ಬಿಜೆಪಿ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ತರುಣ್ ಗೊಗೊಯ್ ಅವರು ಹೇಳಿದ್ದರು. ಮೂಲಗಳ ಪ್ರಕಾರ ನಾನು ಕೇಳಿದಂತೆ, ರಂಜನ್ ಗೊಗೊಯ್  ಅವರ ಹೆಸರು ಬಿಜೆಪಿ ಮುಖ್ಯಮಂತ್ರಿಗಳ ಅಭ್ಯರ್ಥಿ ಪಟ್ಟಿಯಲ್ಲಿ ಇದೆ. ಮುಂದೆ ಅವರು ಅಸ್ಸಾಂ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಅನುಮಾನ ಇದೆ ಎಂದು ತರುಣ್ ಗೊಗೊಯ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com