ಪೂರ್ವ ಲಡಾಕ್ ಭದ್ರತಾ ಸ್ಥಿತಿಗತಿ ಕುರಿತು ಪರಾಮರ್ಶೆ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ(ಎಲ್ ಎಸಿ) ಭಾರತ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ ಮಾತುಕತೆಗಳು ನಡೆಯುತ್ತಿರುವಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿನ ಒಟ್ಟಾರೆ ಭದ್ರತಾ ಸ್ಥಿತಿಗತಿಗಳ ಪರಾಮರ್ಶೆ ನಡೆಸಿದ್ದಾರೆ.
ಪೂರ್ವ ಲಡಾಕ್ ನ ಭಾಗದ ಒಂದು ಗಡಿ
ಪೂರ್ವ ಲಡಾಕ್ ನ ಭಾಗದ ಒಂದು ಗಡಿ

ನವದೆಹಲಿ: ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ(ಎಲ್ ಎಸಿ) ಭಾರತ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ ಮಾತುಕತೆಗಳು ನಡೆಯುತ್ತಿರುವಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿನ ಒಟ್ಟಾರೆ ಭದ್ರತಾ ಸ್ಥಿತಿಗತಿಗಳ ಪರಾಮರ್ಶೆ ನಡೆಸಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜ.ಎಂ ಎಂ ನಾರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯಾ ಭಾಗವಹಿಸಿದ್ದಾರೆ.

ಪೂರ್ವ ಲಡಾಕ್ ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಚೀನಾ ದೇಶ ತಾನು ಮಾಡಿಕೊಂಡಿರುವ ನಿರ್ಣಯಕ್ಕೆ ಬದ್ಧವಾಗಿ ಪೂರ್ವ ಲಡಾಕ್ ನಿಂದ ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಕಳೆದ ಮೇ 5ರಂದು ಪೂರ್ವ ಲಡಾಕ್ ನಲ್ಲಿ ಚೀನಾ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ)ಯನ್ನು ನಿಯೋಜಿಸಿದ ನಂತರ ಎರಡೂ ದೇಶಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟು ಕಳೆದ ಜೂನ್ ನಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಚೀನಾ ಕಡೆಯಿಂದ ಸಹ ಹಲವು ಯೋಧರು ಮೃತಪಟ್ಟಿದ್ದರು.

ಗಡಿ ಸಂಘರ್ಷವನ್ನು ತಡೆಯಲು ಭಾರತ ಮತ್ತು ಚೀನಾ ಈಗಾಗಲೇ ಹಲವು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸಿವೆ. ಆದರೆ ಇದುವರೆಗೆ ಭಾರೀ ಮಹತ್ವದ ಬದಲಾವಣೆಯಾಗಲಿ, ಸಕಾರಾತ್ಮಕ ಬೆಳವಣಿಗೆಯಾಗಲಿ ನಡೆದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com