ಎಐಸಿಸಿ ರೇಸ್ ನಲ್ಲಿ ನಾನಿಲ್ಲ: ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಶಿಫಾರಸು ಆಗಿದೆ ಎಂಬ ವಿಚಾರವನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಶಿಫಾರಸು ಆಗಿದೆ ಎಂಬ ವಿಚಾರವನ್ನು ಸ್ವತಃ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಎಐಸಿಸಿ ಸಭೆಯಲ್ಲಿ ತಾವು ಸಹ ಸೋನಿಯಾಗಾಂಧಿ ಅವರನ್ನೇ ಬೆಂಬಲಿಸಿದ್ದು, ಕಾರಣಾಂತರಗಳಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರಬಹುದು. ಆದರೆ ಪಕ್ಷಕ್ಕೆ ಇನ್ನೂ ಶಕ್ತಿಯಿದೆ. ಸೋನಿಯಾಗಾಂಧಿ ಅವರು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ.  ಅವರಾಗದೇ ಹೋದರೆ ರಾಹುಲ್ ಗಾಂಧಿ ಮುಂದುವರೆಯಬೇಕು ಎಂದರು.

ಸಭೆಯಲ್ಲಿ ತಾವೆಲ್ಲರೂ ಸೋನಿಯಾ ಅವರನ್ನೇ ಒಕ್ಕೊರಲಿನಿಂದ ಬೆಂಬಲಿಸಿದ್ದೇವೆ. ಖರ್ಗೆ ಹೆಸರು ರೇಸ್ ನಲ್ಲಿದೆ ಎನ್ನುವುದೆಲ್ಲ ಊಹಾಪೋಹ. ಮಾಧ್ಯಮಗಳು ವಿನಾಕಾರಣ ಊಹಾಪೋಹ ಸೃಷ್ಟಿಸಬಾರದು. ಸೋನಿಯಾ ಬಿಟ್ಟರೆ ರಾಹುಲ್ ಅವರೇ ಮುಂದುವರೆಯುತ್ತಾರೆ. ಮೋದಿ ಸರ್ಕಾರದ ವಿರುದ್ಧ ಪಕ್ಷ  ಹೋರಾಟಕ್ಕೆ ಸಜ್ಜುಗೊಳ್ಳಬೇಕಿದೆ. ಚೀನಾ ಸಂಘರ್ಷ, ನೋಟ್ ಬ್ಯಾನ್ ಸೇರಿದಂತೆ ಕೇಂದ್ರದ ಅನೇಕ ವೈಫಲ್ಯತೆಗಳು ದೇಶದ ಮುಂದಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪಕ್ಷದ ವತಿಯಿಂದ ಜನಜಾಗೃತಿ ಮೂಡಿಸಲಾಗುವುದು ಎಂದರು.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಖರ್ಗೆ ಅವರು, ಕಾಂಗ್ರೆಸ್‌ ಪಕ್ಷ ಬಿಕ್ಕಟ್ಟಿನಲ್ಲಿರುವ ಇಂತಹ ಸಮಯದಲ್ಲಿ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಸೋನಿಯಾ ಗಾಂಧಿಯವರ ಪರ ನಿಂತು ಪಕ್ಷವನ್ನು ಬಲಪಡಿಸಬೇಕು. ಸೋನಿಯಾ ಗಾಂಧಿಯವರು ಎಐಸಿಸಿ ಅಧ್ಯಕ್ಷರಾಗಲು ಒಲವು ತೋರದಿದ್ದಲ್ಲಿ ರಾಹುಲ್  ಗಾಂಧಿಯವರು ತಕ್ಷಣವೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬೇಕು. ಆ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು. ಒಂದು ಶತಮಾನದಿಂದ ನೆಹರೂ-ಗಾಂಧಿ ಕುಟುಂಬ ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ಪಕ್ಷ ಮರೆಯಬಾರದು. ಅವರು ಭಾರತದ ಅಭಿವೃದ್ಧಿಯ ಕಲ್ಪನೆಗಾಗಿ ಬಂಡೆಯಂತೆ  ನಿಂತಿದ್ದಾರೆ. ಇದರ ಫಲವಾಗಿ ಸಮಸಮಾಜದ ನಿರ್ಮಾಣ ಮತ್ತು ಬಲಿಷ್ಠ ಪ್ರಜಾಪ್ರಭುತ್ವದ ಅನುಷ್ಠಾನ ಸಾಧ್ಯವಾಗಿದೆ ಎಂದಿದ್ದಾರೆ. 

ಅಲ್ಲದೇ, ಶ್ರೀಮತಿ ಸೋನಿಯಾಗಾಂಧಿ ಅವರು ವೈಯಕ್ತಿಕವಾಗಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಅದಾಗ್ಯೂ ಅವರು ಯಾವಾಗಲೂ ರಾಷ್ಟ್ರ ಮತ್ತು ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ಹೆಚ್ಚು ಆಸಕ್ತಿ ತೋರಿದ್ದಾರೆ. 2004 ಮತ್ತು 2009ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಸೋನಿಯಾ ಗಾಂಧಿಯವರು  ಪಟ್ಟ ಶ್ರಮವನ್ನು ನಾವು ಮರೆಯಬಾರದು ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com