ಕೊರೋನಾ ವೈರಸ್ ಸೋಂಕಿಗೆ ಮೊದಲ ಸಂಸದ ಬಲಿ; ತಮಿಳುನಾಡು ಸಂಸದ ಹೆಚ್ ವಸಂತಕುಮಾರ್ ನಿಧನ

ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಸಂಸದ ಹೆಚ್ ವಸಂತಕುಮಾರ್ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಸಂಸದ ಹೆಚ್ ವಸಂತಕುಮಾರ್
ಸಂಸದ ಹೆಚ್ ವಸಂತಕುಮಾರ್

ಚೆನ್ನೈ: ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಸಂಸದ ಹೆಚ್ ವಸಂತಕುಮಾರ್ ಅವರು ಸಾವನ್ನಪ್ಪಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕನ್ಯಾಕುಮಾರಿ ಕ್ಷೇತ್ರ ಸಂಸದರಾಗಿರುವ ಹೆಚ್ ವಸಂತಕುಮಾರ್ ಅವರು ಇದೇ ಆಗಸ್ಟ್ 10ರಂದು ಕೊರೋನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆಯಿಂದೀಚೆಗೆ ಅವರ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಹೀಗಾಗಿ ಅವರನ್ನು ತೀವ್ರ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ  ನೀಡಲಾಗುತ್ತಿತ್ತು.  ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ತಮಿಳುನಾಡಿನ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ವಸಂತ್ ಕುಮಾರ್ ಅವರು ವಸಂತ್ ಅಂಡ್ ಕಂ ಸಮೂಹ ಸಂಸ್ಥೆಗಳ ಮಾಲೀಕರು ಕೂಡ ಆಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು  ಅವರು 2 ಬಾರಿ ಶಾಸಕರಾಗಿಯೂ ಗೆದ್ದಿದ್ದರು.

ಆ ಮೂಲಕ ವಸಂತ್ ಕುಮಾರ್ ಅವರು ಕೊರೋನಾ ವೈರಸ್ ಸೋಂಕಿಗೆ ಬಲಿಯಾದ ಮೊದಲ ಸಂಸದರಾಗಿದ್ದಾರೆ.

ಇನ್ನು ವಸಂತಕುಮಾರ್ ಅವರ ಸಾವಿಗೆ ಕಾಂಗ್ರೆಸ್ ಕಂಬನಿ ಮಿಡಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ವಸಂತಕುಮಾರ್ ಅವರ ಸಾವಿನಿಂದ ತೀವ್ರ ನೋವಾಗಿದ್ದು, ವಸಂತ್ ಕುಮಾರ್ ಅವರು ಹುಟ್ಟು ಹೋರಾಟಗಾರರಾಗಿದ್ದರು. ಟಿಎನ್ ಸಿಸಿ ಕಾರ್ಯಕಾರಿ  ಅಧ್ಯಕ್ಷರಾಗಿದ್ದ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದರು. ಅವರ ಅಗಲಿಕೆ ಅವರ ಅಭಿಮಾನಿಗಳು ಮತ್ತು ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವುತಂದಿದೆ. ಅವರ ಆತ್ಮಕ್ಕೆ ಶಾಂತಿಸಿಗಲಿ. ಅವರ ಕುಟುಂಬಕ್ಕೆ ಅಗಲಿಕೆ ನೋವು ತಡೆಯುವ ಶಕ್ತಿ ಆ ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com