ಪಕ್ಷದಲ್ಲಿ ಚುನಾವಣೆ ನಡೆಯದಿದ್ದರೆ ಇನ್ನೂ 50 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕೂರಬೇಕಾಗುತ್ತದೆ:ಗುಲಾಂ ನಬಿ ಆಜಾದ್

ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಗೆ ಕೆಲವು ಹಿರಿಯ ನಾಯಕರು ಒತ್ತಾಯಿಸಿ ಪತ್ರ ಬರೆದ ನಂತರ ಪಕ್ಷದಲ್ಲಿ ಹಲವು ಬೆಳವಣಿಗೆಗಳಾಗುತ್ತಿವೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಗೆ ಕೆಲವು ಹಿರಿಯ ನಾಯಕರು ಒತ್ತಾಯಿಸಿ ಪತ್ರ ಬರೆದ ನಂತರ ಪಕ್ಷದಲ್ಲಿ ಹಲವು ಬೆಳವಣಿಗೆಗಳಾಗುತ್ತಿವೆ.

ಈ ಬಗ್ಗೆ ನಿನ್ನೆ ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ನೇಮಕಗೊಂಡ ಕಾಂಗ್ರೆಸ್ ಅಧ್ಯಕ್ಷರಿಗೆ ಶೇಕಡಾ 1ರಷ್ಟು ಕೂಡ ಬೆಂಬಲ ಪಕ್ಷದಲ್ಲಿ ಇರುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೀಗೆ ಎಲ್ಲಾ ಹುದ್ದೆಗಳಿಗೂ ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಬೇಕು, ಇಲ್ಲದಿದ್ದರೆ ಪಕ್ಷದ ಏಳಿಗೆ ಸಾಧ್ಯವಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುವವರು ತಾವು ಎಲ್ಲಿ ಹುದ್ದೆ ಕಳೆದುಕೊಳ್ಳುತ್ತೇವೆಯೋ ಎಂಬ ಭಯ ಅವರಿಗೆ ಎಂದು ಹೇಳಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಪಕ್ಷವನ್ನು ಮುನ್ನಡೆಸಿದರೆ ಮಾತ್ರ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ, ಇಲ್ಲದಿದ್ದರೆ ಕಾಂಗ್ರೆಸ್ ಇನ್ನೂ 50 ವರ್ಷ ಪ್ರತಿಪಕ್ಷ ಸ್ಥಾನದಲ್ಲಿಯೇ ಕುಳಿತುಕೊಳ್ಳಬೇಕಾದೀತು, ಆಡಳಿತ ನಡೆಸುವುದು ಅದಕ್ಕೆ ಕನಸಾಗಬಹುದು ಎಂದು ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಗುಲಾಂ ನಬಿ ಆಜಾದ್ ಆತಂಕ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಪ್ರತಿನಿಧಿಸಿದಾಗ ಪಕ್ಷದಲ್ಲಿ ಶೇಕಡಾ 51ರಷ್ಟು ಮಂದಿ ಬೆಂಬಲ ಸಿಕ್ಕವರು ಆರಿಸಿ ಬರುತ್ತಾರೆ, ಕೇವಲ ಇಬ್ಬರು, ಮೂವರು ವಿರೋಧಿಸುತ್ತಾರೆ. ಶೇಕಡಾ 51ರಷ್ಟು ಮತ ಪಡೆದ ವ್ಯಕ್ತಿ ಆಯ್ಕೆಯಾಗುತ್ತಾನೆ. ಉಳಿದವರಿಗೆ ಶೇಕಡಾ 10ರಿಂದ 15ರಷ್ಟು ಮತಗಳು ಸಿಗುತ್ತವೆ. ಚುನಾವಣೆಯಲ್ಲಿ ಗೆದ್ದು ಪಕ್ಷದ ಅಧ್ಯಕ್ಷನಾದ ನಾಯಕನ ಜೊತೆ ಶೇಕಡಾ 51ರಷ್ಟು ಸದಸ್ಯರು ಬೆಂಬಲವಾಗಿ ನಿಲ್ಲುತ್ತಾರೆ. ಚುನಾವಣೆ ನಡೆಸುವುದರಿಂದ ಆಗುವ ಲಾಭವಿದು.ಈಗ ಚುನಾವಣೆ ನಡೆಸದೆ ನೇಮಕಗೊಳ್ಳುವ ಅಧ್ಯಕ್ಷನಿಗೆ ಶೇಕಡಾ 1ರಷ್ಟು ಕೂಡ ಬೆಂಬಲ ಇಲ್ಲದಿರಬಹುದು, ಆಗ ಪಕ್ಷದಲ್ಲಿ ಉತ್ತಮವಾಗಿ ಕೆಲಸ ನಡೆಯುವುದಿಲ್ಲ ಎಂದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಿದರೆ ಅವರನ್ನು ತೆಗೆದುಹಾಕಲು ಆಗುವುದಿಲ್ಲ, ಆಗ ಸಮಸ್ಯೆಯೇ ಬರುವುದಿಲ್ಲವಲ್ಲ, ಎರಡು, ಮೂರು, ನಾಲ್ಕನೇ ಸ್ಥಾನ ಬಂದವರು ನಾವು ಇನ್ನಷ್ಟು ಕೆಲಸ ಮಾಡಬೇಕು, ಪಕ್ಷದ ಬಲವರ್ಧನೆಗಾಗಿ ದುಡಿಯಬೇಕು ಎಂದು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com