ಸೆ.10ಕ್ಕೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಡೆಗೆ ಅಧಿಕೃತವಾಗಿ ಸೇರ್ಪಡೆ, ಫ್ರಾನ್ಸ್ ರಕ್ಷಣಾ ಸಚಿವರಿಗೂ ಆಹ್ವಾನ

ಫ್ರಾನ್ಸ್ ನಲ್ಲಿ ತಯಾರಾಗಿ ಇತ್ತೀಚೆಗಷ್ಟೆ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್.
ರಫೇಲ್ ಯುದ್ಧ ವಿಮಾನ
ರಫೇಲ್ ಯುದ್ಧ ವಿಮಾನ

ನವದೆಹಲಿ:ಫ್ರಾನ್ಸ್ ನಲ್ಲಿ ತಯಾರಾಗಿ ಇತ್ತೀಚೆಗಷ್ಟೆ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್.

ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಅಂದು ನಡೆಯಲಿರುವ ಸಮಾರಂಭದಲ್ಲಿ ಫ್ರಾನ್ಸ್ ನ ರಕ್ಷಣಾ ಸಚಿವ ಫ್ಲೊರೆನ್ಸ್ ಪರ್ಲಿ ಅವರಿಗೆ ಕೂಡ ಆಹ್ವಾನ ನೀಡಲಾಗಿದೆ.

ಈ ಬಗ್ಗೆ ಎಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ರಕ್ಷಣಾ ಮೂಲಗಳು, ರಕ್ಷಣಾ ಸಚಿವರು ರಷ್ಯಾದಲ್ಲಿ ಶಾಂಘೈ ಸಹಕಾರ ಸಂಘದ ರಕ್ಷಣಾ ಸಚಿವರುಗಳ ಸಭೆಯಲ್ಲಿ ಸೆಪ್ಟೆಂಬರ್ 4ರಿಂದ 6ರವರೆಗೆ ಭಾಗವಹಿಸಲಿದ್ದಾರೆ.ಅಲ್ಲಿಂದ ಹಿಂತಿರುಗಿದ ನಂತರ ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿವೆ.

ಕಳೆದ ಜುಲೈ 29ರಂದು ಐದು ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ತರಲಾಗಿತ್ತು. ಇಲ್ಲಿಗೆ ಬಂದ 24 ಗಂಟೆಗಳಲ್ಲಿಯೇ ಪೈಲಟ್ ಗಳಿಗೆ ತರಬೇತಿ ಆರಂಭವಾಗಿತ್ತು. ವಾಯುಪಡೆಯ 17 ಗೋಲ್ಡನ್ ಏರ್ರೋಸ್ ಸ್ಕ್ವಾಡ್ರನ್ ನ ಭಾಗವಾಗಿರುತ್ತದೆ ರಫೇಲ್. ಇದರಲ್ಲಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಅವಳಿ ಸೀಟರ್ ಗಳಿರುತ್ತದೆ. ಈಗಾಗಲೇ ಚೀನಾ ಗಡಿಯ ಲಡಾಕ್ ಕಣಿವೆ ಭಾಗದಲ್ಲಿ ಹಾರಾಟ ನಡೆಸಿರುವ ರಫೇಲ್ ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಾರಾಟ ನಡೆಸಲಿದೆ.

60 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ ಫ್ರಾನ್ಸ್ ನೊಂದಿಗೆ 36 ರಫೇಲ್ ಯುದ್ಧ ವಿಮಾನ ಖರೀದಿಗೆ 2016ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ. ಭಾರತ ಮುಂದಿನ 10-12 ವರ್ಷಗಳಲ್ಲಿ 300ಕ್ಕೂ ಹೆಚ್ಚು ಯುದ್ಧ ವಿಮಾನ ಹೊಂದುವ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com