ಸುಶಾಂತ್ ಸಿಂಗ್ ರಜಪೂತ್ ಸಾವು: ಸತತ 10 ಗಂಟೆಗಳ ನಿರಂತರ ವಿಚಾರಣೆ ಬಳಿಕ ವಾಪಸ್ ತೆರಳಿದ ರಿಯಾ ಚಕ್ರವರ್ತಿ

ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಿಬಿಐ ಅಧಿಕಾರಿಗಳು ಸತತ 10 ಗಂಟೆಗಳ ನಿರಂತರ ವಿಚಾರಣೆಗೆ ಒಳಪಡಿಸಿದ್ದು, ಇದೀಗ ರಿಯಾ ಚಕ್ರವರ್ತಿ ವಿಚಾರಣೆ ಬಳಿಕ ಸಿಬಿಐ ಕಚೇರಿಯಿಂದ ಮನೆಗೆ ವಾಪಸ್ ಆಗಿದ್ದಾರೆ.
ರಿಯಾ ಚಕ್ರವರ್ತಿ
ರಿಯಾ ಚಕ್ರವರ್ತಿ

ನವದೆಹಲಿ: ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಿಬಿಐ ಅಧಿಕಾರಿಗಳು ಸತತ 10 ಗಂಟೆಗಳ ನಿರಂತರ ವಿಚಾರಣೆಗೆ ಒಳಪಡಿಸಿದ್ದು, ಇದೀಗ ರಿಯಾ ಚಕ್ರವರ್ತಿ ವಿಚಾರಣೆ ಬಳಿಕ ಸಿಬಿಐ ಕಚೇರಿಯಿಂದ ಮನೆಗೆ ವಾಪಸ್ ಆಗಿದ್ದಾರೆ.

ಮೂಲಗಳ ಪ್ರಕಾರ ಸಿಬಿಐ ವಿಚಾರಣಾ ತಂಡದಲ್ಲಿರುವ ನೂಪುರ್ ಪ್ರಸಾದ್ ಅವರು ರಿಯಾ ಚಕ್ರವರ್ತಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಸುಶಾಂತ್‌ ಅವರ ಬ್ಯಾಂಕ್ ಖಾತೆಗಳಿಂದ ಹಣ ತೆಗೆದಿದ್ದರು, ಮೃತ ನಟನಿಗೆ ಮಾನಸಿಕ ಹಿಂಸೆ ನೀಡಿದ್ದರು ಎಂಬ ದೂರುಗಳ ಬಗ್ಗೆಯೂ ಸಿಬಿಐ ವಿಚಾರಣೆ ನಡೆಸಿದೆ.  ರಿಯಾ ಅವರ ಸೋದರ ಶೌಬಿಕ್ ಅವರಿಗೂ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು ಎನ್ನಲಾಗಿದೆ. ಅಂತೆಯೇ ರಿಯಾ ಮತ್ತು ಸೌಬಿಕ್ ಅವರನ್ನು ಸಿಬಿಐ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದು, ಅವರ ಹೇಳಿಕೆಗಳಲ್ಲಿ ವ್ಯತ್ಯಾಸಗಳೇನಾದರೂ ಇವೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದೆ ಎನ್ನಲಾಗಿದೆ.  

ಸುಶಾಂತ್‌ ಜೊತೆಗೆ ಒಂದು ವರ್ಷ ಡೇಟಿಂಗ್ ಮಾಡಿದ್ದ ರಿಯಾ ನಟ ಸಾವನ್ನಪ್ಪುವ ಆರು ದಿನ ಮೊದಲು, ಅಂದರೆ ಜೂನ್ 8ರಂದು ಅವರಿಂದ ಬೇರೆಯಾಗಿದ್ದರು. 28ರ ಹರೆಯದ ರಿಯಾ ಅವರ ವಿಚಾರಣೆ ವೇಳೆ ಸಿಬಿಐ ಕೇಳಿದ 10 ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ.  ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ  ಬಿತ್ತರಿಸಿದ್ದು, ಸಿಬಿಐ ಅಧಿಕಾರಿಗಳು ರಿಯಾ ಅವರನ್ನು, ನಿಮಗೆ ಸುಶಾಂತ್‌ ಸಿಂಗ್ ರಜಪೂತ್ ಸಾವಿನ ವಿಚಾರವನ್ನು ತಿಳಿಸಿದವರು ಯಾರು? ಆಗ ನೀವು ಎಲ್ಲಿದ್ದಿರಿ? ಸಾವಿನ ವಿಷಯ ತಿಳಿದ ತಕ್ಷಣ ನೀವು ಬಾಂದ್ರಾ ಮನೆಗೆ ಹೋದ್ರಾ? ಇಲ್ಲವಾದಲ್ಲಿ ಯಾಕೆ, ಯಾವಾಗ ಮತ್ತು ಎಲ್ಲಿ ಸುಶಾಂತ್‌ನ ಮೃತದೇಹ  ನೋಡಿದಿರಿ? ಎಂದು ಕೇಳಿದ್ದಾರೆ ಎನ್ನಲಾಗಿದೆ.

ಇದಲ್ಲದೆ ಜೂನ್ 8ರಂದು ಸುಶಾಂತ್‌ ಸಿಂಗ್ ರಜಪೂತ್‌ ಮನೆಯಿಂದ ಹೊರಗೆ ಹೋಗಿದ್ದು ಏಕೆ? ಜಗಳವಾಡಿಕೊಂಡು ಸುಶಾಂತ್‌ ಮನೆಯಿಂದ ಹೊರನಡೆದದ್ದಾ? ಸುಶಾಂತ್‌ ಮನೆಯಿಂದ ಹೊರನಡೆದ ನಂತರ, ಜೂನ್ 9 ಮತ್ತು 14ರಂದು ಸುಶಾಂತ್‌ ಜೊತೆಗೆ ಮಾತನಾಡಿದ್ರಾ? ಒಂದು ವೇಳೆ ಹೌದು  ಎಂದಾದಲ್ಲಿ ಏನು ವಿಷಯ? ಒಂದ ವೇಳೆ ಇಲ್ಲ ಎಂದಾದಲ್ಲಿ ಏಕೆ? ನಿಮ್ಮನ್ನು ಸಂಪರ್ಕಿಸಲು ಸುಶಾಂತ್‌ ಸಿಂಗ್ ಪ್ರಯತ್ನಿಸಿದ್ದರೇ? ನೀವು ಅವರ ಫೋನ್ ಕಾಲ್‌ಗಳನ್ನು ಸ್ವೀಕರಿಸಲಿಲ್ಲವೇ? ಸ್ವೀಕರಿಸಲಿಲ್ಲ ಎಂದಾದರೆ ಏಕೆ? ನೀವು ಅವರ ಕಾಲ್‌ಗಳನ್ನು ಬ್ಲಾಕ್ ಮಾಡಿದ್ದು ಏಕೆ? ನಿಮ್ಮ ಕುಟುಂಬದ ಇತರ ಯಾವುದೇ  ಸದಸ್ಯರನ್ನು ಭೇಟಿಯಾಗಲು ಸುಶಾಂತ್ ಯತ್ನಿಸಿದ್ದಿರಾ? ಯಾವ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆದಿತ್ತು? ಸುಶಾಂತ್ ಸಿಂಗ್‌ ರಜಪೂತ್‌ರ ಆರೋಗ್ಯ ಸಮಸ್ಯೆಗಳು ಮತ್ತು ಅದಕ್ಕೆ ಅವರು ತೆಗೆದುಕೊಳ್ಳುತ್ತಿದ್ದ ಚಿಕಿತ್ಸೆ. ವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಔಷಧಗಳ ಮಾಹಿತಿ ಕುರಿತು ಸಿಬಿಐ  ಅಧಿಕಾರಿಗಳು ರಿಯಾ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಅಂತೆಯೇ ಸುಶಾಂತ್‌ ಕುಟುಂಬದ ಜೊತೆಗೆ ನಿಮ್ಮ ಸಂಬಂಧ ಹೇಗಿತ್ತು? ಮತ್ತು ಸಿಬಿಐ ತನಿಖೆಗೆ (ರಿಯಾ) ಒತ್ತಾಯಿಸಿದ್ದು ಏಕೆ? ಅನುಮಾನಗಳೇನಾದರೂ ಇತ್ತೆ? ಎಂದು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ರಿಯಾ ಚಕ್ರವರ್ತಿ ಏನು ಉತ್ತರ ನೀಡಿದರು ಎಂಬುದು ಬಹಿರಂಗವಾಗಿಲ್ಲವಾದರೂ, ರಿಯಾ ತಮ್ಮನ್ನು ತಾವು  ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂದು ಹೇಳಲಾಗಿದೆ.

ಇನ್ನು ನಿನ್ನೆ ಇದೇ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ರಿಯಾ, ಸುಶಾಂತ್ ಸಾವಿನ ವಿಚಾರಕ್ಕೆ ಸಂಬಂಧಿಸದಂತೆ ನನ್ನ ಕುಟುಂಬದ ವಿರುದ್ಧದ ದಾಳಿ ನಿಲ್ಲಿಸಿ. ಸುಶಾಂತ್ ಸಿಂಗ್ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಸುಶಾಂತ್ ನನ್ನ ಕನಸಿನಲ್ಲಿ ಬಂದಿದ್ದರಿಂದ ಇಂದು  ಮಾಧ್ಯಮದ ಮುಂದೆ ಬಂದಿದ್ದೇನೆ. ಕನಸಿನಲ್ಲಿ ಬಂದ ಸುಶಾಂತ್, ಸತ್ಯ ಏನು ಎಂಬುವುದನ್ನು ತಿಳಿಸು, ಧೈರ್ಯವಾಗಿರು ಎಂದು ಹೇಳಿದ್ದರಿಂದ ಸಂದರ್ಶನ ನೀಡುತ್ತಿದ್ದೇನೆ. ಜೂನ್ 14ರಂದು ಶವಾಗಾರದಲ್ಲಿ ನಾನು ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದೆ. ಅಂದು ನಾನು ಸೋದರನ ಜೊತೆ  ಮನೆಯಲ್ಲಿದ್ದೆ. ಆ ವೇಳೆ ನನ್ನ ಫ್ರೆಂಡ್ ಕರೆ ಮಾಡಿ, ಕೆಲ ಸುದ್ದಿಗಳು ಹರಿದಾಡುತ್ತಿದ್ದು, ಅದನ್ನು ನಿಲ್ಲಿಸುವಂತೆ ಹೇಳಿದರು. ಆದರೆ ನನ್ನ ಫ್ರೆಂಡ್ ಗೆ ನಾನು ನನ್ನ ಸುಶಾಂತ್ ಮನೆಯಿಂದ ಹೊರ ಬಂದಿರುವ ವಿಚಾರ ತಿಳಿದಿರಲಿಲ್ಲ. ಸುಶಾಂತ್ ಅಂತಿಮ ದರ್ಶನ ಪಡೆಯಲು ಅವರ ಮನೆಗೆ ಹೋಗಿರಲಿಲ್ಲ. ಸಾವಿನ  ವಿಷಯ ತಿಳಿದಾಗ ಶಾಕ್ ಆಗಿತ್ತು. ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ತಿಳಿಯದಾಗಿತ್ತು. ಸುಶಾಂತ್ ಸಾವು ನನ್ನನ್ನು ಸಂಪೂರ್ಣವಾಗಿ ಸೋಲಿಸಿತ್ತು. ಸುಶಾಂತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವವರ ಲಿಸ್ಟ್ ನಲ್ಲಿ ನನ್ನ ಹೆಸರು ಇರಲಿಲ್ಲ. ಆ ಲಿಸ್ಟ್ ನಲ್ಲಿ ಇಂಡಸ್ಟ್ರಿಯವರ ಹೆಸರುಗಳಿದ್ದವು.  ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈ ಬಿಟ್ಟಿದ್ದರಿಂದ ಅಂತ್ಯಕ್ರಿಯೆಗೆ ತೆರಳಲಿಲ್ಲ ಎಂದು ಹೇಳಿದ್ದರು.

ಅಂತೆಯೇ ನನಗೆ ಶವಾಗಾರದ ಹೊರಗೆ ನಿಲ್ಲುವಂತೆ ಹೇಳಲಾಗಿತ್ತು. ನನ್ನ ಗೆಳೆಯ ಅಲ್ಲಿದ್ದ ಒಬ್ಬರಿಗೆ ಮೃತದೇಹ ನೋಡಲು ಅನುಮತಿ ನೀಡುವಂತೆ ಕೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಈ ವೇಳೆ ನೀವು ಮೃತದೇಹ ನೋಡಬಹುದು ಎಂದು ಹೇಳಿದ್ದರು.  ಕೇವಲ 3 ರಿಂದ 4 ಸೆಕೆಂಡ್ ಸುಶಾಂತ್ ಮೃತದೇಹ ನೋಡಿದ್ದೇನೆ. ಆಗ ಸಾರಿ ಕೇಳಿ, ಸುಶಾಂತ್ ಕಾಲಿಗೆ ನಮಸ್ಕರಿಸಿದ್ದೇನೆ. ಸುಶಾಂತ್ ತನ್ನ ಪ್ರಾಣ ಕಳೆದುಕೊಂಡಿದ್ದ, ದುಃಖದಲ್ಲಿದ್ದ ನಾನು ಐ ಆ್ಯಮ್ ಸಾರಿ ಎಂದು ಹೇಳಿ ಕಣ್ಣೀರಿಟ್ಟಿದ್ದೆ. ಆದರೆ ಇಂದು ಆ ಪದವನ್ನ ತಮಾಷೆ ಮಾಡಲಾಗುತ್ತಿದೆ. ನನ್ನ ಮಾತುಗಳಿಗೆ  ಬೇರೆ ಬೇರೆ ಅರ್ಥ ಕಲ್ಪಿಸಿದವರ ಮನೋಸ್ಥಿತಿಯ ಬಗ್ಗೆ ಬೇಸರವಿದೆ ಎಂದು ಹೇಳಿದ್ದಾರೆ.

ಸುಶಾಂತ್‌ ಮಾದಕವಸ್ತು ಸೇವಿಸುತ್ತಿದ್ದರು
ಸುಶಾಂತ್‌ ಸಿಂಗ್‌ ರಜಪೂತ್‌ ಮಾದಕವಸ್ತು ಸೇವನೆ ಮಾಡುತ್ತಿದ್ದರು. ಸುಶಾಂತ್‌ ಮರಿಜುವಾನಾ (ಮಾದಕ ವಸ್ತು) ಸೇವಿಸುತ್ತಿದ್ದರು. ಡ್ರಗ್ಸ್‌ ಸೇವನೆ ಮಾಡುವುದನ್ನು ನಿಲ್ಲಿಸು ಎಂದು ಹಲವು ಸಲ ಹೇಳಿದ್ದೆ ಹಾಗೂ ಅವರಿಂದ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ ಅಷ್ಟೇ.. ಆದರೆ ನಾನೇ ಮಾದಕವಸ್ತು ಸೇವಿಸುತ್ತಿದ್ದೆ.  ಇದಕ್ಕಾಗಿ ಸುಶಾಂತ್ ರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೆ ಎಂದು ಬಿಂಬಿಸಲಾಗುತ್ತಿದೆ. ನಾನು ನನ್ನ ಜೀವಮಾನದಲ್ಲೇ ಡ್ರಗ್ಸ್‌ ಸೇವನೆ ಮಾಡಿಲ್ಲ, ಬೇಕಾದರೆ ನನ್ನ ರಕ್ತ ಪರೀಕ್ಷೆ ಮಾಡಲಿ ಎಂದು ರಿಯಾ ಸವಾಲೆಸೆದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com