ಸಂಸತ್‌ನ ಮುಂಗಾರು ಅಧಿವೇಶನ: ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಓಂ ಬಿರ್ಲಾ

ಸಂಸತ್‌ನ ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನವನ್ನು ಸುಗಮವಾಗಿ ನಡೆಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂಬಂಧ ಬಿರ್ಲಾ ಅವರು ಉಭಯ ಸದನಗಳ ಕಾರ್ಯದರ್ಶಿಗಳು, ಸಿಪಿಡಬ್ಲ್ಯುಡಿ ಮತ್ತು ಎನ್‌ಡಿಎಂಸಿ ಅಧಿಕಾರಿಗಳ ಸಭೆಯನ್ನು ಗುರುವಾರ ನಡೆಸಿದರು. ಅಧಿವೇಶನದ  ಅವಧಿಯಲ್ಲಿ ಭದ್ರತೆ ಮತ್ತು ಸ್ಯಾನಿಟೈಸೇಷನ್ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಿಪಿಡಬ್ಲ್ಯುಡಿ ಮತ್ತು ಎನ್‌ಡಿಎಂಸಿ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದು ಬಿರ್ಲಾ ಸೂಚಿಸಿದರು.

ಅಧಿವೇಶನದ ಅವಧಿಯಲ್ಲಿ ಧ್ವನಿ ವ್ಯವಸ್ಥೆ, ಭಾಷಾಂತರ ಸೇವೆ, ಸಂಸತ್‌ ಕಟ್ಟಡದ ಇತರ ಪರ್ಯಾಯ ಸ್ಥಳಗಳಲ್ಲಿ ಸಂಸದರ ಸಿಬ್ಬಂದಿಗೆ ಸೌಲಭ್ಯ, ಸಂಸತ್ತು ಸಂಕೀರ್ಣದಲ್ಲಿ ನೈರ್ಮಲ್ಯ, ಸಂಸತ್ತು ಆವರಣದಲ್ಲಿ ಸ್ವಚ್ಛತೆಗಾಗಿ ಸರಿಯಾದ ವ್ಯವಸ್ಥೆ ಮಾಡುವಂತೆ ಬಿರ್ಲಾ ಅವರು ಲೋಕಸಭೆಯ ಪ್ರಧಾನ ಕಾರ್ಯದರ್ಶಿ  ಸ್ನೇಹಲತಾ ಶ್ರಿವಾಸ್ತವ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅವರಿಗೆ ಸೂಚಿಸಿದರು.

ಅಧಿವೇಶನದಲ್ಲಿ, ಸಂಸದರ ಓಡಾಟ ಮತ್ತು ಇತರ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾದ ಶಿಷ್ಟಾಚಾರಗಳನ್ನು ಸಮಯಕ್ಕೆ ಸಿದ್ಧಪಡಿಸಬೇಕು. ಸಂಸದರಿಗೆ ಸಮಯಕ್ಕೆ ಸರಿಯಾಗಿ ಇವುಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಅಧಿವೇಶನದಲ್ಲಿ ನೌಕರರಿಗೆ ವಿವರವಾದ ಮಾರ್ಗಸೂಚಿಗಳನ್ನು ಸಹ ನೀಡಬೇಕು ಎಂದು  ಸ್ಪೀಕರ್ ಹೇಳಿದರು. ಅಧಿವೇಶನದಲ್ಲಿ ಸಾಮಾಜಿಕ ಅಂತರದ ನಿರ್ದೇಶನಗಳ ಜೊತೆಗೆ, ಕೊರೋನಾ ಸೋಂಕನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಲೋಕಸಭಾ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಮತ್ತು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಅಧಿವೇಶನದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com