ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.43ರಷ್ಟು ಸೋಂಕಿತರು ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕದಲ್ಲೇ ಇದ್ದಾರೆ: ಕೇಂದ್ರ ಸರ್ಕಾರ

ದೇಶದಲ್ಲಿರುವ ಒಟ್ಟಾರೆ ಕೊರೋನಾ ಸೋಂಕಿತರ ಪೈಕಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಈ ಮೂರು ರಾಜ್ಯಗಳಲ್ಲೇ ಶೇ.43ರಷ್ಟು ಸೋಂಕಿತರಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಆಂಧ್ರ ಪ್ರದೇಶದಲ್ಲಿ ಕೊರೋನಾ ಆರ್ಭಟ
ಆಂಧ್ರ ಪ್ರದೇಶದಲ್ಲಿ ಕೊರೋನಾ ಆರ್ಭಟ

ನವದೆಹಲಿ: ದೇಶದಲ್ಲಿರುವ ಒಟ್ಟಾರೆ ಕೊರೋನಾ ಸೋಂಕಿತರ ಪೈಕಿ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಈ ಮೂರು ರಾಜ್ಯಗಳಲ್ಲೇ ಶೇ.43ರಷ್ಟು ಸೋಂಕಿತರಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 78,512 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 36,21,246ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಒಂದೇ ದಿನ 971 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆ 64,469ಕ್ಕೆ  ಹೆಚ್ಚಳವಾಗಿದೆ. ಇನ್ನು 36,21,246 ಮಂದಿ ಸೋಂಕಿತರ ಪೈಕಿ 27,74,802 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿ ಇನ್ನೂ 7,81,975 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.43ರಷ್ಟು ಸೋಂಕಿತರು ಕೇವಲ 3 ರಾಜ್ಯಗಳಲ್ಲೇ ಇದ್ದು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಶೇ.43ಸೋಂಕಿತರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಸೋಂಕಿತರ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ  ಅಂದರೆ ಶೇ.21ರಷ್ಟು ಸೋಂಕಿತರಿದ್ದು, ಮಹಾರಾಷ್ಟ್ರದಲ್ಲಿ ಈ ವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 7, 80, 689ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 16,408 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂತೆಯೇ 7,690 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್  ಆಗಿದ್ದು, ಒಟ್ಟಾರೆ 5,62,401 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ನಿನ್ನೆ 296 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೋವಿಡ್ ಸಾವಿನ ಸಂಖ್ಯೆ 24,399ಕ್ಕೆ ಏರಿಕೆಯಾಗಿದೆ.

ಇನ್ನು 2ನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು, ಇಲ್ಲಿ ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.13.5ರಷ್ಟು ಸೋಂಕಿತರು ಆಂಧ್ರ ಪ್ರದೇಶದಲ್ಲಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸತತ ಐದನೇ ದಿನವೂ ಹೊಸ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, ನಿನ್ನೆ ಒಂದೇ ದಿನ 10,603 ಸೋಂಕು ಪ್ರಕರಣಗಳು  ದಾಖಲಾಗಿವೆ. ಆ ಮೂಲಕ ಆಂಧ್ರ ಪ್ರದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,24,767ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,21,754 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂತೆಯೇ 99,129 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಒಂದೇ ದಿನ 88 ಮಂದಿ  ಸೋಂಕಿತರು ಸಾವನ್ನಪ್ಪುವ ಮೂಲಕ ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸಾವಿನ ಸಂಖ್ಯೆ 3,884ಕ್ಕೆ ಏರಿಕೆಯಾಗಿದೆ.

ಅಂತೆಯೇ ಕರ್ನಾಟಕದಲ್ಲಿ ಶೇ.11.27ರಷ್ಟು ಸೋಂಕಿತರಿದ್ದು, ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ 8,852 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಕರ್ನಾಟಕದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 3,35,928ಕ್ಕೇರಿಕೆಯಾಗಿದೆ. ಅಂತೆಯೇ 7,101 ಮಂದಿ ಗುಣಮುಖರಾಗಿದ್ದು, ಆ  ಮೂಲಕ ಒಟ್ಟು 2,42,229 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ಧಾರೆ. 88,091 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಟ್ಟಾರೆ ದೇಶದ ಒಟ್ಟಾರೆ ಸೋಂಕಿತರ ಪೈಕಿ ಈ ಮೂರು ರಾಜ್ಯಗಳಲ್ಲೇ ಶೇ.43ರಷ್ಟು ಸೋಂಕಿತರಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com