ಘರ್ಷಣೆಯ ಸಾಂದರ್ಭಿಕ ಚಿತ್ರ
ಘರ್ಷಣೆಯ ಸಾಂದರ್ಭಿಕ ಚಿತ್ರ

'ದೆಹಲಿ ಚಲೋ' ಪ್ರತಿಭಟನಾ ನಿರತ ರೈತರು-ಪೊಲೀಸರ ನಡುವೆ ಘರ್ಷಣೆ: ಎಫ್ಐಆರ್ ದಾಖಲು

ಕಳೆದ ವಾರ ದೆಹಲಿಯ ಸಿಂಘು ಗಡಿಭಾಗದಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ನವದೆಹಲಿ: ಕಳೆದ ವಾರ ದೆಹಲಿಯ ಸಿಂಘು ಗಡಿಭಾಗದಲ್ಲಿ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ದೆಹಲಿಯ ಅಲಿಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಆಯೋಜಿಸಿರುವ ಪ್ರತಿಭಟನೆ ವೇಳೆ ಸಿಂಘು ಭಾಗದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಕಳೆದ ಶುಕ್ರವಾರ ಮಧ್ಯಾಹ್ನ 12.15ರ ವೇಳೆಗೆ ಪ್ರತಿಭಟನಾಕಾರರು ಹಿಂಸಾತ್ಮಕ ರೂಪಕ್ಕೆ ತಿರುಗಿ ಬೃಹತ್ ಸಂಖ್ಯೆಯಲ್ಲಿ ದೆಹಲಿಗೆ ಪ್ರವೇಶಿಸಲು ನೋಡಿದ್ದರು.

ಪ್ರತಿಭಟನಾ ನಿರತ ರೈತರು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಯತ್ನಿಸಿದಾಗ ಘರ್ಷಣೆ ನಡೆಯಿತು. ನಾಲ್ವರು ಪೊಲೀಸರು ಗಾಯಗೊಂಡಿದ್ದರು. ಎರಡು ಸರ್ಕಾರಿ ವಾಹನಗಳು ಮತ್ತು ಒಂದು ಖಾಸಗಿ ಬಸ್ಸು ಕೂಡ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಸ್ತುವನ್ನು ಹಾಳುಮಾಡಿದ್ದಕ್ಕೆ ಮತ್ತು ಕೊರೋನಾ ನಿಯಮ ಉಲ್ಲಂಘಿಸಿ ಪ್ರತಿಭಟನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಕಾಯ್ದೆ ಮತ್ತು ಕಾನೂನು ವಿರೋಧಿಯಾಗಿ ಗುಂಪು ಸೇರುವ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಹಾಳುಗೆಡವಿರುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಾ ಕಳೆದ ಶುಕ್ರವಾರ ದೆಹಲಿಯ ಸಿಂಘು ಗಡಿ ತಲುಪಿದ್ದರು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com