ರೈತರ ಜತೆ ಕೇಂದ್ರದ ಮಾತುಕತೆ ವಿಫಲ, ಡಿಸೆಂಬರ್ 3ಕ್ಕೆ ಮತ್ತೆ ಸಭೆ

ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ಸರ್ಕಾರ ನೀಡಿದ ಆಫರ್ ನ್ನು 35 ಪ್ರತಿಭಟನಾ ನಿರತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದರಿಂದ ಯಾವುದೇ ಪರಿಹಾರ ಕಾಣದೆ ಮೂರು ಕೇಂದ್ರ ಸಚಿವರ ಸಮ್ಮುಖದಲ್ಲಿ ಇಂದು ನಡೆದ ಸಭೆ ಮುಕ್ತಾಯವಾಗಿದೆ.
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್  ಜೊತೆಯಲ್ಲಿ ರೈತ ಯೂನಿಯನ್ ಗಳ ಮುಖಂಡರು
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಜೊತೆಯಲ್ಲಿ ರೈತ ಯೂನಿಯನ್ ಗಳ ಮುಖಂಡರು

ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ಸರ್ಕಾರ ನೀಡಿದ ಆಫರ್ ನ್ನು 35 ಪ್ರತಿಭಟನಾ ನಿರತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದರಿಂದ ಯಾವುದೇ ಪರಿಹಾರ ಕಾಣದೆ ಮೂರು ಕೇಂದ್ರ ಸಚಿವರ ಸಮ್ಮುಖದಲ್ಲಿ ಇಂದು ನಡೆದ ಸಭೆ ಮುಕ್ತಾಯವಾಗಿದೆ.

ಸಭೆ ಅನಿಶ್ಚಿತವಾಗಿಯೇ ಉಳಿದಿದೆ ಮತ್ತು ಡಿಸೆಂಬರ್ 3 ರ ಗುರುವಾರ ಮತ್ತೊಂದು ಸುತ್ತಿನ ಚರ್ಚೆಗೆ ಸರ್ಕಾರ ಕರೆ ನೀಡಿದೆ ಎಂದು ಯೂನಿಯನ್ ಮುಖಂಡರು ತಿಳಿಸಿದ್ದಾರೆ. ಮಾತುಕತೆ ಮುಂದುವರಿಯಲಿದ್ದು, ಮುಂದಿನ ಸುತ್ತಿನ ಮಾತುಕತೆ ಗುರುವಾರ ನಿಗದಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡೂವರೆಗೂ ಹೆಚ್ಚು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಜಾರಿಯಾಗಿರುವ ಮೂರು ನೂತನ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ರೈತ ಪ್ರತಿನಿಧಿಗಳು ಸರ್ವಾನುಮತದಿಂದ ಒತ್ತಾಯಿಸಿದ್ದಾಗಿ ಮೂಲಗಳು ಹೇಳಿವೆ.

ಕೇಂದ್ರದ ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳ ಕರುಣೆಗೆ ಅವರನ್ನು ಬಿಡಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆತಂಕ ವ್ಯಕ್ತಪಡಿಸಿದರು. ಹೊಸ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ತರುತ್ತವೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪಡೆದುಕೊಳ್ಳುತ್ತವೆ ಎಂದು ಸರ್ಕಾರ ಹೇಳಿದೆ.

ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಸಹಾಯಕ ಖಾತೆ ಸಚಿವ ಸೋಮ್ ಪ್ರಕಾಶ್ ಉಪಸ್ಥಿತರಿದ್ದರು. 

ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಸಿದ್ಧವಾಗಿದೆ ಎಂದು ತೋಮರ್ ಸುದ್ದಿಗಾರರಿಗೆ ಹೇಳಿದರು. ಆದರೆ, ನೂತನ ಕೃಷಿ ಕಾನೂನುಗಳನ್ನು ಪರಿಶೀಲಿಸಲು ಐವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಸರ್ಕಾರ ನೀಡಿದ ಪ್ರಸ್ತಾವನೆಯನ್ನು ರೈತ ಒಕ್ಕೂಟಗಳು ತಿರಸ್ಕರಿಸಿರುವುದಾಗಿ ಭಾರತ್ ಕಿಸಾನ್ ಯೂನಿಯನ್ ಸದಸ್ಯ ರೂಪ್ ಸಿಂಗ್ ಸಂಹಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ನವೆಂಬರ್ 13 ರಂದು ನಡೆದ ಹಿಂದಿನ ಸಭೆಯಲ್ಲೂ ಯಾವುದೇ ಪ್ರಗತಿ ಇಲ್ಲದೆ ವಿಫಲವಾಗಿತ್ತು ಮತ್ತು ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 3ಕ್ಕೆ ನಿಗದಿಯಾಗಿದ್ದ ಸಭೆಯನ್ನು ಎರಡು ದಿನ ಮುಂಚಿತವಾಗಿ ಇಂದು ನಡೆಸಲಾಯಿತು. ಆದರೆ, ಇಂದಿನ ಸಭೆಯಲ್ಲೂ ಯಾವುದೇ ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ಸಭೆ ವಿಫಲವಾಗಿದ್ದು, ಡಿಸೆಂಬರ್ ಮೂರಕ್ಕೆ ಮತ್ತೆ ಸಭೆ ನಿಗದಿಯಾಗಿದೆ. ಅಲ್ಲಿ ಕೈಗೊಳ್ಳುವ ನಿರ್ಧಾರಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com