ರೈತರ ಪ್ರತಿಭಟನೆಯಲ್ಲಿ ಕೊಳಕು ರಾಜಕೀಯ ಮಾಡಬೇಡಿ: ಅರವಿಂದ್ ಕೇಜ್ರಿವಾಲ್
ರಾಷ್ಟ್ರ ರಾಜಧಾನಿಯ ಗಡಿಯ ಸುತ್ತ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರೈತರ ಪ್ರತಿಭಟನೆಯಲ್ಲಿ ಕೊಳಕು ರಾಜಕೀಯ ಮಾಡಬೇಡಿ ಎಂದಿದ್ದಾರೆ.
Published: 02nd December 2020 06:44 PM | Last Updated: 02nd December 2020 06:44 PM | A+A A-

ರೈತರ ಪ್ರತಿಭಟನೆ
ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯ ಸುತ್ತ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರೈತರ ಪ್ರತಿಭಟನೆಯಲ್ಲಿ ಕೊಳಕು ರಾಜಕೀಯ ಮಾಡಬೇಡಿ ಎಂದಿದ್ದಾರೆ.
ಟ್ವೀಟರ್ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ನಾನು ದೆಹಲಿಯಲ್ಲಿ ಕಪ್ಪು ಕಾನೂನುಗಳನ್ನು ಅಂಗೀಕರಿಸಿದ್ದೇನೆ ಎಂದು ಪಂಜಾಬ್ ಸಿಎಂ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಈ ದುರ್ಬಲ ಪರಿಸ್ಥಿತಿಯಲ್ಲಿ ಅವರು ಇಂತಹ ಕೆಳಮಟ್ಟದ ರಾಜಕೀಯವನ್ನು ಹೇಗೆ ಮಾಡಬಹುದು? ಈ ಕಾನೂನುಗಳನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಅಲ್ಲ. ಹಾಗಿದ್ದರೇ ದೇಶದ ರೈತರು ಕೇಂದ್ರದೊಂದಿಗೆ ಏಕೆ ಮಾತುಕತೆ ನಡೆಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ದೆಹಲಿಯ ಒಂಬತ್ತು ಕ್ರೀಡಾಂಗಣಗಳನ್ನು ಜೈಲುಗಳಾಗಿ ಪರಿವರ್ತಿಸಲು ನಾವು ಅನುಮತಿಸಲಿಲ್ಲ. ಈ ಕ್ರೀಡಾಂಗಣಗಳಲ್ಲಿ ರೈತರನ್ನು ಇರಿಸಲು ಕೇಂದ್ರ ಬಯಸಿತ್ತು. ಆದರೆ ನಾನು ಅದಕ್ಕೆ ಅನುಮತಿ ನೀಡದ ಕಾರಣ ಪಂಜಾಬ್ ಸಿಎಂ ಅಸಮಾಧಾನಗೊಂಡಿದ್ದಾರೆ ಮತ್ತು ನನ್ನ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಘೋಷಿಸಿದೆ ಮತ್ತು ಕೆಲವು ದಿನಗಳ ಹಿಂದೆ ಪ್ರತಿಭಟನಾ ನಿರತ ರೈತರನ್ನು ಬಂಧಿಸಲು ದೆಹಲಿಯ ಒಂಬತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಮಾಡುವ ಕೇಂದ್ರದ ಮನವಿಯನ್ನು ನಿರಾಕರಿಸಿದೆ ಎಂದು ದೆಹಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.