ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣಹೋಮ ಸಾಧ್ಯವಿಲ್ಲ: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ಛಾಟಿ

ಶ್ರೀ ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಛಾಟಿ ಬೀಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಶ್ರೀ ಕೃಷ್ಣನಿಗಾಗಿ ಸಾವಿರಾರು ಮರಗಳ ಮಾರಣ ಹೋಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಛಾಟಿ ಬೀಸಿದೆ.

ಮಥುರಾ ಐತಿಹಾಸಿಕ ಶ್ರೀ ಕೃಷ್ಣ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಉತ್ತರ  ಪ್ರದೇಶ ಸರ್ಕಾರ 3 ಸಾವಿರ ಮರಗಳನ್ನು ಕತ್ತರಿಸಲು ಮುಂದಾಗಿತ್ತು. ಸರ್ಕಾರದ ಈ ವಿವಾದಾತ್ಮಕ ನಡೆಗೆ ಪರಿಸರವಾದಿಗಳು  ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಚ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬಾಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಪೀಠ,  ಉತ್ತರಪ್ರದೇಶ ಸರ್ಕಾರ ಕೃಷ್ಣನ ಹೆಸರಲ್ಲಿ ಸುಮಾರು 3,000 ಮರಗಳನ್ನು ಕತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಇನ್ನು ತಾವು ಕಡಿಯುವ ಮರಗಳಿಗೆ ಬದಲಾಗಿ ಅದಕ್ಕಿಂತ ಹೆಚ್ಚು ಗಿಡಗಳನ್ನು ನೆಡಲಾಗುತ್ತದೆ ಎಂಬ ಸರ್ಕಾರದ ವಾದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಹೊಸ ಗಿಡಗಳನ್ನು ನೆಡುವುದು 100 ವರ್ಷದ ಹಳೆಯ ಮರಗಳನ್ನು ಕಡಿಯುವುದಕ್ಕೆ ಸಮಾನವಾಗಲಾರದು, ಹೊಸ  ಗಿಡಗಳು ನೂರಾರು ವರ್ಷಗಳಷ್ಟು ಹಳೆಯ ಮರಗಳಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆಯೇ.. ಗಿಡಗಳು ಮರಗಳಿಗೆ ಸಮಾನವಾಗಲಾರದು. ಮರಗಳ ಬಾಕಿ ಉಳಿದಿರುವ ಜೀವಿತಾವಧಿ ಮತ್ತು ಅವುಗಳ ಆಮ್ಲಜನಕ ಬಿಡುಗಡೆ ಪ್ರಮಾಣವನ್ನು ಪರಿಶೀಲಿಸಬೇಕಾಗುತ್ತದೆ ಎಂದು  ಹೇಳಿದೆ.

ಮಥುರಾ ಜಿಲ್ಲೆಯ ಕೃಷ್ಣ ದೇವಾಲಯಕ್ಕೆ ಸಾಗುವ 25 ಕಿ.ಮೀ. ಉದ್ದ ರಸ್ತೆಯನ್ನು ಅಗಲಗೊಳಿಸಲು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವಂತೆ ಕೋರಿ ಉತ್ತರಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com