'ದೆಹಲಿ ಚಲೋ' ಪ್ರತಿಭಟನೆಗೆ 'ಆನೆಬಲ': ವೈದ್ಯರು, ವಕೀಲರು, ವಿದ್ಯಾರ್ಥಿಗಳ ಬೆಂಬಲ, ಇಂದು ಮತ್ತೊಂದು ಸುತ್ತಿನ ಮಾತುಕತೆ

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ರೈತರ ಪ್ರತಿಭಟನೆ, ಒತ್ತಾಯ
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ರೈತರ ಪ್ರತಿಭಟನೆ, ಒತ್ತಾಯ

ನವದೆಹಲಿ/ಚಂಡೀಗಢ: ಕೇಂದ್ರ ಸರ್ಕಾರದ ನೂತನ 3 ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ರೈತರ ಜೊತೆ ಇದೀಗ ವೈದ್ಯರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಕೀಲರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಕಾರ್ಯಕರ್ತರು, ಗಾಯಕರು ಸೇರಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರಿಗೆ ಇನ್ನಷ್ಟು ಬಲ ಸಿಕ್ಕಿದಂತಾಗಿದೆ. 

ದೆಹಲಿಯ ಸಿಂಘು, ಟಿಕ್ರಿ, ಚಿಲ್ಲ ಮತ್ತು ಗಜಿಪುರ್ ಗಡಿಗಳಲ್ಲಿ ಪ್ರತಿಭಟನೆ ತೀವ್ರವಾಗಿದೆ. ಪ್ರತಿಭಟನಾ ಸ್ಥಳಗಳಲ್ಲಿ ಹೆಚ್ಚು ಟೆಂಟ್ ಗಳು, ಕುರ್ಚಿಗಳು, ಕಾರ್ಪೆಟ್ ಇತ್ಯಾದಿಗಳನ್ನು ತಂದು ಇಟ್ಟು ಅಲ್ಲೇ ಬೀಡುಬಿಟ್ಟಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನಾಕಾರರಿಗೆ ತರಕಾರಿ ಮತ್ತು ಹಾಲುಗಳನ್ನು ಪೂರೈಸುತ್ತಿದ್ದಾರೆ. ಹರ್ಯಾಣ, ಪಂಜಾಬ್, ದೆಹಲಿಗಳ ಗುರುದ್ವಾರ ಸಮಿತಿ ಮತ್ತು ಸಿಖ್ ಕಾರ್ಯಕರ್ತರು ಕಂಬಳಿ ಮತ್ತು ಹಾಸಿಗೆಗಳನ್ನು ಚಳಿಯಿಂದ ರಕ್ಷಿಸಿಕೊಳ್ಳಲು ನೀಡುತ್ತಿದ್ದಾರೆ. ಹತ್ತಿರದ ಇಂಧನ ಕೇಂದ್ರಗಳಿಂದ ಉಚಿತವಾಗಿ ಪೆಟ್ರೋಲ್, ಡೀಸೆಲ್ ಗಳು ಸಿಗುತ್ತಿದೆ.

ಪ್ರತಿನಿತ್ಯ ಹತ್ತಾರು ವೈದ್ಯರು ಬಂದು ತಪಾಸಣೆ ಮಾಡಿ ಅನಾರೋಗ್ಯಕ್ಕೊಳಗಾದವರಿಗೆ, ಹಿರಿಯರನ್ನು ತಪಾಸಣೆ ಮಾಡಿ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಾರೆ. ನಾವು ಪ್ರತಿಭಟನೆ ಮುಗಿಯುವವರೆಗೆ ರೈತರ ಜೊತೆ ಇರುತ್ತೇವೆ ಎಂದು ಪಂಜಾಬ್ ಸರ್ಕಾರದ ಮಾಜಿ ಸರ್ಜನ್ ಡಾ ಡಿ ಎಸ್ ಮುಲ್ತಾನಿ ಹೇಳುತ್ತಾರೆ. ಸಿಂಘು ಗಡಿಭಾಗದಲ್ಲಿ ರೈತರಿಗೆ ಆರೋಗ್ಯ ತಪಾಸಭೆ ಏರ್ಪಡಿಸಲಾಗಿದ್ದು ಇತರ ಪ್ರತಿಭಟನಾ ಸ್ಥಳಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತೇವೆ ಎಂದು ಡಾ ಹರ್ಜಿತ್ ಸಿಂಗ್ ಭಟ್ಟಿ ಟ್ವೀಟ್ ಮಾಡಿದ್ದಾರೆ.

ದೆಹಲಿಯ ಏಮ್ಸ್, ಸಫ್ದರ್ಜಂಗ್, ಹಿಂದೂ ರಾವ್ ಮತ್ತು ಇತರ ಆಸ್ಪತ್ರೆಗಳ ವೈದ್ಯರು ಸಹಾನುಭೂತಿಯಿಂದ ರೈತರು ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಬಂದು ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. ಯುನೈಟೆಡ್ ಸಿಖ್ ನಂತಹ ಎನ್ ಜಿಒಗಳು ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿವೆ. ಟಿಕ್ರಿ ಗಡಿಯಲ್ಲಿ ರೆಡ್ ಕ್ರಾಸ್ ಸೊಸೈಟಿ ಆರು ಮಂದಿ ಕಾರ್ಮಿಕರೊಂದಿಗೆ 5 ಆಂಬ್ಯುಲೆನ್ಸ್ ಸೇವೆಗಳನ್ನು ನೀಡುತ್ತಿದೆ. 

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ವೈದ್ಯಕೀಯ ಶಿಬಿರವನ್ನು ಆಯೋಜಿಸಿದೆ. ಲುಧಿಯಾನ ಮಿಷನರಿ ಕಾಲೇಜು ವಿದ್ಯಾರ್ಥಿಗಳು ಕಂಬಳಿಗಳನ್ನು ಒದಗಿಸಿದ್ದಾರೆ. 

ಮೋದಿ ಸರ್ಕಾರ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಮತ್ತೆ ತರಲು ಪ್ರಯತ್ನಿಸುತ್ತಿದ್ದು, ರೈತರ ಜೀವನವನ್ನು ನಾಶ ಮಾಡಲು ಹೊರಟಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘಟನೆ ಮಾಜಿ ಅಧ್ಯಕ್ಷೆ ನಂದಿತಾ ನಾರಾಯಣ್ ಹೇಳಿದ್ದಾರೆ. 
ಇಂದು ಕೇಂದ್ರ ಸರ್ಕಾರದ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳ ಮಧ್ಯೆ ಮತ್ತೆ ಸಭೆ ನಡೆಯಲಿದ್ದು ರೈತ ನಾಯಕರು ಈಗ ಸಭೆಯಲ್ಲಿ ಭಾಗವಹಿಸಲು ದೆಹಲಿಯತ್ತ ಮುಖಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ, 35 ನಾಯಕರು ಹೋಗಿ ಸರ್ಕಾರದ ಸಚಿವರು ಮತ್ತು ಪ್ರತಿನಿಧಿಗಳನ್ನು ಭೇಟಿ ಮಾಡುತ್ತೇವೆ. ನಾವು ವಿದ್ಯಾವಂತ ರೈತರು, ನಮಗೆ ಯಾವುದು ಒಳ್ಳೆಯದು ಎಂದು ನಮಗೆ ಗೊತ್ತಿದೆ. ಕೇಂದ್ರ ಸರ್ಕಾರದ ಈ ಹೊಸ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಗಡಿಗಳಲ್ಲಿ, ರಾಜಧಾನಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಅದರ ಜಂಟಿ ಕಾರ್ಯದರ್ಶಿ ಎಸ್ ಎಸ್ ಸುಬ್ರನ್ ಮಾತನಾಡಿ, ರೈತರನ್ನು ಇಬ್ಭಾಗ ಮಾಡಲು ಕೇಂದ್ರ ಸರ್ಕಾರ ನೋಡುತ್ತಿದೆ. ಪ್ರಧಾನಿ ಮೋದಿಯವರೇ ಸ್ವತಃ ಸಭೆ ನಡೆಸದೆ ನಾವು ಯಾವುದೇ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಅವರು ಎಲ್ಲಾ 507 ರೈತ ಸಂಘಟನೆಗಳ ಜೊತೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com