ಕೇಂದ್ರದ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರಗೋಳಿಸಲು ರೈತರ ಸಂಘಟನೆಗಳ ನಿರ್ಧಾರ, ಡಿ.8ಕ್ಕೆ ಭಾರತ್ ಬಂದ್
ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮತಷ್ಟು ಬಿಸಿ ಮುಟ್ಟಿಸಲು ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಿವೆ.
Published: 04th December 2020 06:55 PM | Last Updated: 04th December 2020 06:55 PM | A+A A-

ರೈತರ ಪ್ರತಿಭಟನೆ
ನವದೆಹಲಿ: ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮತಷ್ಟು ಬಿಸಿ ಮುಟ್ಟಿಸಲು ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಿವೆ.
ಇಂದು ಸಿಂಘು ಗಡಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘಟನೆಗಳ ಮುಖಂಡರು, ಹೊಸ ಕೃಷಿ ಕಾಯಿದೆಗಳ ಬಗ್ಗೆ ನಮಗೆ ತೃಪ್ತಿ ಇಲ್ಲ. ಇತ್ತೀಚಿಗೆ ಜಾರಿಗೆ ತಂದ ಮೂರು ಕಾಯಿದೆಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
"ನಿನ್ನೆ, ನಾವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೇವೆ. ಡಿಸೆಂಬರ್ 8 ರಂದು ನಾವು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ" ಎಂದು ಅವರು ಹೇಳಿದ್ದಾರೆ.
ಸರ್ಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲಾ ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ಎರಡು ಬಾರಿ ನಡೆಸಿದ ಮಾತುಕತೆ ವಿಫಲವಾಗಿದ್ದು, ನಾಳೆ ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಲಾಗಿದೆ. ಈ ಮಧ್ಯ ರೈತ ಸಂಘಟನೆಗಳು ಡಿಸೆಂಬರ್ 8ಕ್ಕೆ ಭಾರತ್ ಬಂದ್ ಗೆ ಕರೆ ನೀಡಿವೆ.
ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ರೈತರು ದೆಹಲಿ-ನೊಯ್ಡಾ ಗಡಿ ಭಾಗದಲ್ಲಿ ಜಮಾಯಿಸಿದ್ದು, ದೆಹಲಿಯಲ್ಲಿ ಹರಿಯಾಣ-ಪಂಜಾಬ್ ರೈತರು ಆರಂಭಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜಧಾನಿಗೆ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.