ಕೊರೋನಾ ಲಸಿಕೆ ದರ ನಿಗದಿ ಕುರಿತು ರಾಜ್ಯಗಳೊಂದಿಗೆ ಕೇಂದ್ರ ಮಾತುಕತೆ ನಡೆಸುತ್ತಿದೆ: ಪ್ರಧಾನಿ ಮೋದಿ
ದೇಶದಾದ್ಯಂತ ಕೋವಿಡ್-19 ಪರಿಸ್ಥಿತಿ ಪರಿಶೀಲನೆ ನಡೆಸುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸರ್ವಪಕ್ಷ ಸಭೆ ಆರಂಭಿಸಿದ್ದು, ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರೂ ಕೂಡ ಭಾಗಿಯಾಗಿದ್ದಾರೆ.
Published: 04th December 2020 01:06 PM | Last Updated: 04th December 2020 01:19 PM | A+A A-

ಸರ್ವಪಕ್ಷ ಸಭೆಯಲ್ಲಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ನವದೆಹಲಿ: ದೇಶದಾದ್ಯಂತ ಕೋವಿಡ್-19 ಪರಿಸ್ಥಿತಿ ಪರಿಶೀಲನೆ ನಡೆಸುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಸರ್ವಪಕ್ಷ ಸಭೆ ಆರಂಭಿಸಿದ್ದು, ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರೂ ಕೂಡ ಭಾಗಿಯಾಗಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗದ ಹಂತದಲ್ಲಿದ್ದು, ಲಸಿಕೆ ಬಂದ ಕೂಡಲೇ ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ವಿಜ್ಞಾನಿಗಳು ಕೊರೋನಾ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಜಗತ್ತು ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ನಿಗಾ ಇಡುತ್ತಿದೆ. ಅದಕ್ಕಾಗಿಯೇ ಇದೀಗ ಇಡೀ ವಿಶ್ವ ಭಾರತದತ್ತ ಚಿತ್ತ ಹರಿಸಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವೇ ವಾರಗಳಲ್ಲಿ ಕೊರೋನಾ ಲಸಿಕೆ ಸಿದ್ಧವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಸಿಕೆಗೆ ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ, ಭಾರತದಲ್ಲಿ ಲಸಿಕೆ ವಿತರಣೆ ಪ್ರಾರಂಭವಾಗುತ್ತದೆ. ಆರೋಗ್ಯ ಕಾರ್ಯಕರ್ತರು, ವಯೋವೃದ್ಧರು ಹಾಗೂ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮೊದಲು ಆದ್ಯತೆ ನೀಡಲಾಗುತ್ತದೆ.
ಲಸಿಕೆ ಬೆಲೆ ಕುರಿತು ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯಾವುದಕ್ಕೆ ಆದ್ಯತೆ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಎಲ್ಲಾ ರೀತಿಯ ಸಲಹೆಗಳನ್ನು ಲಿಖಿತವಾಗಿ ಕಳುಹಿಸುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ನೀಡುವ ಎಲ್ಲಾ ಸಲಹೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂಬ ಭರವಸೆಯನ್ನು ನಾನು ನೀಡುತ್ತೇನೆ ಎಂದಿದ್ದಾರೆ.