ಚಳಿ ಮಧ್ಯೆ ಕಾವೇರುತ್ತಿದೆ 'ದೆಹಲಿ ಚಲೋ': ಶೀತ ಗಾಳಿ, ಕೊರೋನಾ ಮಧ್ಯೆ ವೃದ್ಧರು, ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಭಾಗಿ

81 ವರ್ಷದ ಪಂಜಾಬ್ ಮೂಲದ ಸಂಗ್ರೂರ್ ನ ರೈತ ಮಹಿಳೆ ಅಜ್ಜಿ ಬಲ್ವಿಂದರ್ ಕೌರ್ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆಗುತ್ತಿರುತ್ತದೆ. ಈ ಇಳಿವಯಸ್ಸಿನಲ್ಲಿ ಮೊಬೈಲ್ ಆ ರೀತಿ ರಿಂಗ್ ಆಗುತ್ತಿದ್ದರೆ, ಮೊಬೈಲ್ ನಲ್ಲಿ ಪದೇ ಪದೇ ಮಾತನಾಡಲೂ ಸಾಧ್ಯವಾಗುವುದಿಲ್ಲ.
ಘೋಷಣೆ ಕೂಗುತ್ತಾ ಸಾಗುತ್ತಿರುವ ರೈತರು
ಘೋಷಣೆ ಕೂಗುತ್ತಾ ಸಾಗುತ್ತಿರುವ ರೈತರು

ನವದೆಹಲಿ: 81 ವರ್ಷದ ಪಂಜಾಬ್ ಮೂಲದ ಸಂಗ್ರೂರ್ ನ ರೈತ ಮಹಿಳೆ ಅಜ್ಜಿ ಬಲ್ವಿಂದರ್ ಕೌರ್ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆಗುತ್ತಿರುತ್ತದೆ. ಈ ಇಳಿವಯಸ್ಸಿನಲ್ಲಿ ಮೊಬೈಲ್ ಆ ರೀತಿ ರಿಂಗ್ ಆಗುತ್ತಿದ್ದರೆ, ಮೊಬೈಲ್ ನಲ್ಲಿ ಪದೇ ಪದೇ ಮಾತನಾಡಲೂ ಸಾಧ್ಯವಾಗುವುದಿಲ್ಲ.

ದೆಹಲಿಯ ಸಿಂಘು ಗಡಿಭಾಗದಲ್ಲಿ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರುದ್ಧ ನಡೆಯುತ್ತಿರುವ ಪ್ರತಿಭಚಟನೆಯಲ್ಲಿ ಬಹುಶಃ ಕೌರ್ ಅವರೇ ಅತಿ ಹಿರಿಯ ಮಹಿಳೆ ಭಾಗಿಯಾಗಿದ್ದು ಇರಬೇಕು. ದೆಹಲಿಯ ಚಳಿ, ಮಳೆ ಮಧ್ಯೆ ರಸ್ತೆಯಲ್ಲಿ ಹಗಲು-ರಾತ್ರಿ ಕುಳಿತು ಪ್ರತಿಭಟನೆ ಮಾಡುತ್ತಿರುವ ಕೌರ್ ಬಗ್ಗೆ ಊರಿನಲ್ಲಿರುವ ಅವರ ಕುಟುಂಬದವರಿಗೆ ಗಾಬರಿಯಾಗಿ ಗಂಟೆಗೊಮ್ಮೆ ಕರೆ ಮಾಡುತ್ತಿರುತ್ತಾರಂತೆ. 

ತಮ್ಮ ಗುಂಪಿನ ರೈತರೊಂದಿಗೆ ಹಳ್ಳಿಯಿಂದ ಬಂದು ದೆಹಲಿ-ಹರ್ಯಾಣ ಗಡಿಭಾಗದಲ್ಲಿ ಬಲ್ವಿಂದರ್ ಕೌರ್ ಬೀಡುಬಿಟ್ಟಿದ್ದಾರೆ. ಆದರೆ ಇಲ್ಲಿ ಅವರೊಬ್ಬರೇ ಮಹಿಳೆಯಲ್ಲ. ಅವರ ಜೊತೆ ಸಾವಿರಾರು ಮಹಿಳೆ ಮತ್ತು ಪುರುಷ ರೈತರು ದೇಶದ ನಾನಾ ಭಾಗಗಳಿಂದ ದೆಹಲಿ ಚಲೋ ಪ್ರತಿಭಟನೆಗೆ ಬಂದಿದ್ದಾರೆ.

ನನ್ನ ಇಡೀ ಕುಟುಂಬ ಪಂಜಾಬ್ ನಲ್ಲಿದೆ. ನಾನು ಇಲ್ಲಿಗೆ ಬರಲು ಮುಂದಾದಾಗ ಪ್ರತಿಯೊಬ್ಬರೂ ಕುಟುಂಬದವರು ನನ್ನನ್ನು ತಡೆಯಲು ನೋಡಿದರು. ಆದರೆ ನಾನು ನನ್ನ ಸೋದರ-ಸೋದರಿಯರಿಗೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ. ಇದು ಮುಕ್ತ ಭಾರತವಾಗಿದ್ದು, ಪ್ರಧಾನಿ ಮೋದಿಯವರು ಜಮಿನ್ದಾರ ಮತ್ತು ಬ್ರಿಟಿಷ್ ಆಡಳಿತ ಪದ್ಧತಿಯನ್ನು ತರಲು ಬಿಡುವುದಿಲ್ಲ ಎಂದು ಕೌರ್ ಗುಡುಗುತ್ತಾರೆ. 

ರೈತರ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರ್ಯಾಣ ಮತ್ತು ದೆಹಲಿ-ಉತ್ತರ ಪ್ರದೇಶ ಗಡಿಭಾಗಗಳಲ್ಲಿ ದಿನದಿಂದ ದಿನಕ್ಕೆ ಮಹಿಳಾ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದೆ. 

ಕೋವಿಡ್-19 ಸಾಂಕ್ರಾಮಿಕ, ಚಳಿ, ಗಾಳಿ, ಮಾಲಿನ್ಯದ ನಡುವೆ 6 ತಿಂಗಳ ಮಗುವನ್ನು ಕರೆದುಕೊಂಡು ಬಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ 37 ವರ್ಷದ ಮತ್ತೊಬ್ಬ ಮಹಿಳೆ ಮಮತಾ, ಉತ್ತರ ಪ್ರದೇಶದ ಫೈಜಾನ್ಪುರದವರು. ನಮ್ಮ ಮಕ್ಕಳಿಗಾಗಿ, ಉತ್ತಮ ನಾಳೆಗಾಗಿ, ಈ ದೇಶದ ರೈತರಿಗಾಗಿ ನಮ್ಮ ಕುಟುಂಬದ ಭವಿಷ್ಯಕ್ಕಾಗಿ ನಾನು ಇಲ್ಲಿಗೆ ಹೋರಾಟಕ್ಕಿಳಿದಿದ್ದೇನೆ ಎನ್ನುತ್ತಾರೆ.

 ಉತ್ತರ ಪ್ರದೇಶದ ರಾಂಪುರದಿಂದ ರಾಧಾ ಎಂಬುವವರು ತಮ್ಮ ಮೂರು ಜನ ಮಕ್ಕಳೊಂದಿಗೆ ನಿನ್ನೆ ಬೆಳಗ್ಗೆ ಸಿಂಘು ಗಡಿಗೆ ಬಂದಿಳಿದಿದ್ದಾರೆ. ಚಳಿ, ಗಾಳಿಯ ಮಧ್ಯೆ ಶೌಚಾಲಯ, ಬಾತ್ ರೂಂ ವ್ಯವಸ್ಥೆಗಳಿಲ್ಲದೆ ಮಕ್ಕಳೊಂದಿಗೆ ಇಲ್ಲಿಗೆ ಬಂದು ಹೆದ್ದಾರಿಯಲ್ಲಿ ಹಗಲು-ರಾತ್ರಿ ಕಳೆಯುವುದು ಕಷ್ಟವಾಗುತ್ತದೆ. ಆದರೆ ಹೋರಾಟವಿಲ್ಲದೆ ಯುದ್ಧ ಮಾಡಲು ಸಾಧ್ಯವೇ, ಕೇಂದ್ರ ಸರ್ಕಾರ ಮಸೂದೆ ಹಿಂಪಡೆಯುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ರಾಧಾ ಹೇಳುತ್ತಾರೆ.

ಈಗ ಹೆದ್ದಾರಿಗಳ ಪಕ್ಕದಲ್ಲಿರುವ ಅಂಗಡಿ, ಹೊಟೇಲ್ ಮಾಲೀಕರು ರೈತರಿಗೆ ಬಾತ್ ರೂಂ, ಶೌಚಾಲಯಗಳನ್ನು ಬಳಸಲು ಅನುಮತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com