'ದೆಹಲಿ ಚಲೋ' ಪ್ರತಿಭಟನೆ ತೀವ್ರ ಸ್ವರೂಪಕ್ಕೆ: 5ನೇ ಸುತ್ತಿನ ಮಾತುಕತೆ ಹಿನ್ನೆಲೆ ಕೇಂದ್ರ ಸಚಿವರಿಂದ ಪ್ರಧಾನಿ ಮೋದಿ ಭೇಟಿ

ಕೃಷಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿದರೂ, ತಮ್ಮ ಪಟ್ಟು ಬಿಡದೆ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ ನಡೆಯಲಿದೆ. 
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು

ನವದೆಹಲಿ: ಕೃಷಿ ಮಸೂದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿದರೂ, ತಮ್ಮ ಪಟ್ಟು ಬಿಡದೆ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರೈತರೊಂದಿಗೆ 5ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಈ ನಡುವಲ್ಲೇ ಕೇಂದ್ರ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾತುಕತೆ ನಡೆಸಿದ್ದಾರೆ. 

ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನ ರೇಂದ್ರ ಮೋದಿಯವರ ನಿವಾಸಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 

ಮಾತುಕತೆಯ ಸಂಪೂರ್ಣ ವಿವರ ಹೊರಬಂದಿಲ್ಲವಾದರೂ, ರೈತ ಸಂಘಟನೆಗಳ ಪ್ರತಿನಿಧಿಗಳು ಕೃಷಿ ಕಾನೂನು ಹಿಂಪಡೆಯಲು ಒತ್ತಾಯಿಸುತ್ತಿರುವ ಕಾರಣ, ಪ್ರತಿಭಟನೆಯ ಕುರಿತು ಪ್ರಧಾನಿಯವರಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಕೃಷಿ ಸಚಿವ ತೋಮರ್ ಅವರು, ರೈತರೊಂದಿಗೆ ಇಂದು ಮಧ್ಯಾಹ್ನ 2 ಗಂಟೆಗೆ ಮಾತುಕತೆ ನಡೆಯಲಿದೆ. ಇಂದು ನಡೆಯುವ ಮಾತುಕತೆ ವೇಳೆ ರೈತರಿಂದ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಈ ಹಿಂದೆ ಹೇಳಿಕೆ ನೀಡಿದ್ದ ಕಿಸಾನ್ ಮಹಾಪಂಚಾಯತ್ ಅಧ್ಯಕ್ಷ ರಾಂಪಾಲ್ ಜಾಟ್ ಅವರು, ಇಂದು ನಡೆಯುವ ಮಾತುಕತೆ ವೇಳೆ ಕೇಂದ್ರದಿಂದ ಧನಾತ್ಮಕ ಸ್ಪಂದನೆ ದೊರಕದೇ ಹೋದಲ್ಲಿ ರಾಜಸ್ಥಾನದಿಂದ ರೈತರು ದೆಹಲಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-8ನ್ನು ಬಂದ್ ಮಾಡಲಿದ್ದಾರೆಂದು ಹೇಳಿದ್ದರು.

ರೈತ ಸಂಘ ಮತ್ತು ಕೇಂದ್ರದ ಪ್ರತಿನಿಧಿಗಳ ನಡುವೆ ಐದನೇ ಸುತ್ತಿನ ಮಾತುಕತೆ ಶನಿವಾರ ಮಧ್ಯಾಹ್ನ ವಿಜ್ಞಾನ ಭವನದಲ್ಲಿ ನಡೆಯಲಿದೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ರೈಲ್ವೆ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯೆಲ್ ಮಾತುಕತೆ ನಡೆಸಲಿದ್ದಾರೆ. 

ರೈತರ ಪ್ರತಿಭಟನೆಯು 10 ನೇ ದಿನಕ್ಕೆ ಕಾಲಿಟ್ಟಿದೆ ಮತ್ತು ಕಳೆದ ಹತ್ತು ದಿನಗಳಿಂದ ದೆಹಲಿ ಗಡಿಯಲ್ಲಿರುವ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com