ಕೃಷಿ ಸಚಿವ ತೋಮರ್ ಮನವಿ ತಿರಸ್ಕರಿಸಿದ ರೈತ ಪ್ರತಿನಿಧಿಗಳು

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ವೃದ್ಧರು ಹಾಗೂ ಮಕ್ಕಳನ್ನು ನಿರಶನ ಸ್ಥಳಗಳಿಂದ ಮನೆಗಳಿಗೆ ಮರಳಲು ಸೂಚಿಸಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಸಂಘದ ಪ್ರತಿನಿಧಿಗಳಿಗೆ ಶನಿವಾರ  ಮನವಿ ಮಾಡಿಕೊಂಡಿದ್ದಾರೆ.
ರೈತ ಪ್ರತಿನಿಧಿಗಳು
ರೈತ ಪ್ರತಿನಿಧಿಗಳು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ವೃದ್ಧರು ಹಾಗೂ ಮಕ್ಕಳನ್ನು ನಿರಶನ ಸ್ಥಳಗಳಿಂದ ಮನೆಗಳಿಗೆ ಮರಳಲು ಸೂಚಿಸಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತ ಸಂಘದ ಪ್ರತಿನಿಧಿಗಳಿಗೆ ಶನಿವಾರ  ಮನವಿ ಮಾಡಿಕೊಂಡಿದ್ದಾರೆ.

ಆದರೆ ಸಚಿವರ ಮನವಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ರೈತ ಪ್ರತಿನಿಧಿಗಳು, ‘ನಮ್ಮ ಬಳಿ ವರ್ಷಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ಹೊಂದಿದ್ದೇವೆ. ಸರ್ಕಾರ ನಮ್ಮನ್ನು ರಸ್ತೆಗಳಲ್ಲಿ ಇರಿಸಲು ಬಯಸಿದರೆ .. ನಮಗೇನು ಸಮಸ್ಯೆಯಿಲ್ಲ ಎಂದು ತಿರುಗೇಟು ನೀಡಿದ್ದಾರೆ. ರೈತ ಸಂಘಗಳ  ಪ್ರತಿನಿಧಿಗಳ ಹಾಗೂ ಕೇಂದ್ರ ಸಚಿವರ ತಂಡದ ನಡುವೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆಯ ವೇಳೆ ಈ ಮಾತುಕತೆ ನಡೆದವು.

ಅಂತಿಮವಾಗಿ ಮಾತುಕತೆ ವಿಫಲಗೊಂಡಿದ್ದು, ಡಿಸೆಂಬರ್ 9 ರಂದು ಆರನೇ ಸುತ್ತಿನ ಮಾತುಕತೆಗೆ ಎರಡೂ ಕಡೆಯವರು ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ. ಮಾತುಕತೆಗೆ ಹಾಜರಾದ ರೈತ ಪ್ರತಿನಿಧಿಗಳೊಂದಿಗೆ ಸಚಿವ ತೋಮರ್ ಮಾತನಾಡುತ್ತಾ... " ಪ್ರತಿಭಟನಾ  ಪ್ರದೇಶಗಳಲ್ಲಿರುವ ಹಿರಿಯ ನಾಗರಿಕರು ಹಾಗೂ ಮಕ್ಕಳನ್ನು ಮನೆಗಳಿಗೆ ತೆರಳುವಂತೆ ಸೂಚಿಸಿ ಎಂದು ರೈತ ಪ್ರತಿನಿಧಿಗಳಿಗೆ ಮನವಿಮಾಡಿಕೊಂಡರು. ಆದರೆ ಈ ಮನವಿಯನ್ನು ರೈತ ಪ್ರತಿನಿಧಿಗಳು ಸ್ಪಷ್ಟವಾಗಿ ತಿರಸ್ಕರಿಸಿದರು. " ನಮ್ಮ ಬಳಿ ವರ್ಷಕ್ಕೆ ಸಾಕಾಗುವಷ್ಟು ಆಹಾರ  ಹೊಂದಿದ್ದೇವೆ. ಕಳೆದ ಕೆಲ ದಿನಗಳಿಂದ ನಾವು ರಸ್ತೆಗಳಲ್ಲೇ ಬದುಕಿದ್ದೇವೆ. ಸರ್ಕಾರ ನಮ್ಮನ್ನು ರಸ್ತೆಯಲ್ಲಿ ಇರಿಸಲು ಬಯಸಿದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ.

ನಾವು ಹಿಂಸೆಯ ಹಾದಿ ತುಳಿಯುವುದಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಏನು ಮಾಡುತ್ತಿದ್ದೇವೆ ಎಂಬುದನ್ನು ಗುಪ್ತಚರ ಇಲಾಖೆ ನಿಮಗೆ ತಿಳಿಸುತ್ತದೆ. ನಾವು ಕಾರ್ಪೊರೇಟ್ ಕೃಷಿಯನ್ನು ಬಯಸುವುದಿಲ್ಲ, ಈ ಕಾಯ್ದೆಯಿಂದ ಲಾಭ ಪಡೆಯುವುದು ಸರ್ಕಾರವೇ ಹೊರತು ರೈತನಲ್ಲ ಎಂದು ರೈತ  ಪ್ರತಿನಿಧಿಗಳು ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಒಂದು ಹಂತದಲ್ಲಿ ಸಭೆಯಿಂದ ಹೊರ ನಡೆಯುವುದಾಗಿ ರೈತ ಪ್ರತಿನಿಧಿಗಳು ಎಚ್ಚರಿಸಿದರು. "ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧರಿಸಬೇಕು. ಇಲ್ಲದಿದ್ದರೆ, ನಾವು ಸಭೆಯಿಂದ ಹೊರನಡೆಯುತ್ತೇವೆ ಎಂದು ರೈತ ಪ್ರತಿನಿಧಿಗಳು ಸಚಿವರ ತಂಡಕ್ಕೆ ಎಚ್ಚರಿಕೆ ನೀಡಿದರು ಎಂದು  ವರದಿಯಾಗಿದೆ. ರೈತರೊಂದಿಗೆ ನಡೆಸಿದ ಚರ್ಚೆಯಲ್ಲಿ ಕೃಷಿ ಸಚಿವ ತೋಮರ್ , ರೈಲ್ವೆ ಸಚಿವ ಪಿಯೂಷ್ ಗೋಯೆಲ್ , ವಾಣಿಜ್ಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಭಾಗವಹಿಸಿದರು.

ಸಭೆ ಬಳಿಕ ಮಾತನಾಡಿದ ರೈತರು, 'ಸರ್ಕಾರ ಮೂರು ಕಾನೂನುಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾಪ ಸಲ್ಲಿಸಿದೆ. ಆದರೆ ನಾವು ಯಾವುದೇ ತಿದ್ದುಪಡಿಗೂ ಸಿದ್ಧವಿಲ್ಲ. ಸಂಪೂರ್ಣ ಕಾನೂನನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com