ಕೊರೋನಾ ಲಸಿಕೆ: ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೇಳಿದ ಫಿಜರ್

ಮಾರಕ ಕೊರೋನಾ ವೈರಸ್ ಗೆ ಸಿದ್ಧವಾಗಿರುವ ಫಿಜರ್ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ನೀಡುವಂತೆ ಫಿಜರ್ ಸಂಸ್ಛೆ ಮನವಿ ಮಾಡಿದೆ.
ಫಿಜರ್ ಲಸಿಕೆ
ಫಿಜರ್ ಲಸಿಕೆ

ನವದೆಹಲಿ: ಮಾರಕ ಕೊರೋನಾ ವೈರಸ್ ಗೆ ಸಿದ್ಧವಾಗಿರುವ ಫಿಜರ್ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಅನುಮತಿ ನೀಡುವಂತೆ ಫಿಜರ್ ಸಂಸ್ಛೆ ಮನವಿ ಮಾಡಿದೆ.

ಈಗಾಗಲೇ ಬ್ರಿಟನ್ ಹಾಗೂ ಬಹ್ರೇನ್‌ನಲ್ಲಿ ಸಾರ್ವಜನಿಕ ಬಳಕೆಗೆ ಅನುಮತಿ ಪಡೆದುಕೊಂಡಿರುವ ಅಮೆರಿಕ ಮೂಲದ ಫಿಜರ್-ಬಯೋ ಆ್ಯಂಡ್‌ ಟೆಕ್‌ ಸಂಸ್ಥೆಯ ಕೊರೊನಾ ಲಸಿಕೆ, ಇದೀಗ ಭಾರತದಲ್ಲೂ ತುರ್ತು ಬಳಕೆಗೆ ಅನುಮತಿ ಕೇಳಿದೆ. ಮೂಲಗಳ ಪ್ರಕಾರ ಫಿಜರ್ ತನ್ನ ಕೊರೊನಾ  ವೈರಸ್ ಲಸಿಕೆಯ ತುರ್ತು ಬಳಕೆಯ ಅಧಿಕಾರಕ್ಕಾಗಿ, ದೇಶದ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ)ದಿಂದ ಅನುಮತಿ ಕೋರಿದೆ.

ಕಳೆದ ಡಿಸೆಂಬರ್ 4 ರಂದು ಡಿಸಿಜಿಐಗೆ ಸಲ್ಲಿಸಿದ ಅರ್ಜಿಯಲ್ಲಿ, ದೇಶದಲ್ಲಿ ಮಾರಾಟ ಮತ್ತು ವಿತರಣೆಗಾಗಿ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಫಿಜರ್ ಅನುಮೋದನೆ ಕೋರಿತ್ತು. ಅಲ್ಲದೇ ಭಾರತೀಯರ ಮೇಲೆ ಈ ಲಸಿಕೆ ಪ್ರಯೋಗ ಮಾಡಲು, ಹೊಸ ಔಷಧಗಳು ಮತ್ತು ಕ್ಲಿನಿಕಲ್  ಟ್ರಯಲ್ಸ್ ನಿಯಮ 2019ರ ಅಡಿಯಲ್ಲಿ ವಿಶೇಷ ನಿಬಂಧನೆಗಳಿಗೆ ಅನುಗುಣವಾಗಿ ತುರ್ತು ಬಳಕೆಗೆ ಅವಕಾಶ ನೀಡಬೇಕು ಎಂದು ಸಂಸ್ಥೆ ಮನವಿ ಮಾಡಿದೆ.

ಭಾರತದಲ್ಲಿ ಯಾವುದೇ ಲಸಿಕೆಯನ್ನು ಅನುಮತಿಸಬೇಕಾದರೆ ಕಟ್ಟುನಿಟ್ಟಿನ ಕ್ಲಿನಿಕಲ್ ಪ್ರಯೋಗಳನ್ನು ನಡೆಸಬೇಕಾಗುತ್ತದೆ. ಫಿಜರ್ ಅಥವಾ ಅದರ ಪಾಲುದಾರ ಕಂಪನಿಗಳು ಅಂತಹ ಪ್ರಯೋಗಗಳನ್ನು ನಡೆಸಲು ಕೇಳಿಕೊಂಡಿಲ್ಲ. ಡಿಸಿಜಿಐ ತುರ್ತು ಬಳಕೆಯ ಕಾರಣಕ್ಕೆ ಯಾವುದೇ  ಲಸಿಕೆಯ ಸ್ಥಳೀಯ ಕ್ಲಿನಿಕಲ್ ಪ್ರಯೋಗಗಳನ್ನು ಮನ್ನಾ ಮಾಡುವ ವಿವೇಚನಾ ಶಕ್ತಿಯನ್ನು ಹೊಂದಿದೆ. 

ಬಳಕೆಗೆ ಅನುಮತಿ ಕೇಳಿದ ಮೊದಲ ಸಂಸ್ಥೆ
ಫಿಜರ್-ಬಯೋ ಆ್ಯಂಡ್‌ ಟೆಕ್‌ ತನ್ನ ಕೊರೊನಾ ಲಸಿಕೆಯನ್ನು, ಭಾರತದಲ್ಲಿ ಸಾರ್ವಜನಿಕ ಬಳಕೆಗಾಗಿ ಡಿಸಿಜಿಐಗೆ ಮನವಿ ಮಾಡಿದ ಮೊದಲ ಸಂಸ್ಥೆಯಾಗಿದೆ. ಪ್ರಸ್ತುತ ಬ್ರಿಟನ್‌ನಲ್ಲಿ ಲಸಿಕೆ ಬಳಕೆ ಆರಂಭವಾದರೂ ಫೈಜರ್‌ ಲಸಿಕೆ ಸದ್ಯಕ್ಕೆ ಭಾರತಕ್ಕೆ ಲಭ್ಯವಿಲ್ಲ. ಭಾರತದಲ್ಲಿ ಸದ್ಯ ಮೂರು  ದೇಶೀಯ ಕೊರೊನಾ ಲಸಿಕೆಗಳು ಸಂಶೋಧನಾ ಹಂತದಲ್ಲಿದ್ದು, ಈ ಮಧ್ಯೆ ಫಿಜರ್ ತುರ್ತು ಬಳಕೆಗೆ ಅನುಮತಿ ಕೋರಿರುವುದು ತೀವ್ರ ಕುತೂಹಲ ಕೆರಳಿಸಿದೆ. ಒಂದು ವೇಳೆ ಡಿಸಿಜಿಐ ಫೈಜರ್‌ಗೆ ಅನುಮತಿ ನೀಡಿದರೆ, ಆದಷ್ಟು ಶೀಘ್ರದಲ್ಲಿ ಭಾರತದಲ್ಲಿ ಕೊರೊನಾ ಲಿಸಿಕೆಯೊಂದರ  ಸಾರ್ವಜನಿಕ ಬಳಕೆ ಸಾಧ್ಯವಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com