ಕೇಂದ್ರ ಸರ್ಕಾರದ ಕರಡು ಪ್ರಸ್ತಾವನೆ ತಿರಸ್ಕರಿಸಿದ ರೈತರು, ಪ್ರತಿಭಟನೆ ಮುಂದುವರೆಸಲು ನಿರ್ಧಾರ

ಕೇಂದ್ರ ಸರ್ಕಾರ ಬುಧವಾರ ಕಳುಹಿಸಿದ ಕರಡು ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದು, ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿವೆ.
ರೈತ ಮುಖಂಡರು
ರೈತ ಮುಖಂಡರು

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಕಳುಹಿಸಿದ ಕರಡು ಪ್ರಸ್ತಾವನೆಯನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದು, ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿವೆ.

ಕೇಂದ್ರ ಸರ್ಕಾರ ಕರಡು ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ಅವರು ತಿಳಿಸಿದ್ದಾರೆ.

ಕೃಷಿ ಕಾನೂನುಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದ್ದು, ಡಿಸೆಂಬರ್ 12 ರಂದು ದೆಹಲಿ-ಜೈಪುರ ಹೆದ್ದಾರಿಯನ್ನು ಬಂದ್ ಮಾಡುತ್ತೇವೆ. ಡಿಸೆಂಬರ್ 14 ರಂದು ಬಿಜೆಪಿ ಕಚೇರಿಗಳಿಗೆ ಘೆರಾವ್ ಹಾಕುತ್ತೇವೆ. ಕೇಂದ್ರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ. ದೇಶದ ಇತರ ಭಾಗಗಳ ರೈತರಿಗೆ ದೆಹಲಿಗೆ ಬರುವಂತೆ ನಾವು ಕರೆ ನೀಡುತ್ತಿದ್ದೇವೆ" ಎಂದು ರೈತ ಮುಖಂಡರು ಹೇಳಿದ್ದಾರೆ.

ಇಂದು ಸಂಜೆಯ ವೇಳೆಗೆ ಈ ವಿಷಯಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ನೀಡುವ ಮೂಲಕ ಗೊಂದಲಗಳನ್ನು ನಿವಾರಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್ ದೈತ್ಯ ಸಂಸ್ಥೆಗಳಾದ ಅಂಬಾನಿ ಮತ್ತು ಅದಾನಿಯ ಕಂಪನಿಗಳನ್ನು ಬಹಿಷ್ಕರಿಸಲು ರೈತರು ನಿರ್ಧರಿಸಿದ್ದಾರೆ.

ನಿನ್ನೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ ರೈತ ಮುಖಂಡರು ಇಂದು 6ನೇ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧೇಯಕಕ್ಕೆ ತಿದ್ದುಪಡಿ ಮಾಡಿದ ಕರಡು ಪ್ರಸ್ತಾವನೆಯನ್ನು ಇಂದು ರೈತ ಮುಖಂಡರಿಗೆ ಕಳುಹಿಸಿತ್ತು. ಆದರೆ ರೈತರು ಕರಡು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.

ಕೇಂದ್ರ ಸರ್ಕಾರದ ಕರಡು ಪ್ರಸ್ತಾವನೆಗಳು ಹೀಗಿವೆ

  • ಎಂಎಸ್ ಪಿ ವ್ಯವಸ್ಥೆ ಹೀಗೆಯೇ ಮುಂದುವರೆಯಲಿದೆ ಎಂದು ಲಿಖಿತ ಭರವಸೆ ನೀಡುವುದು 
  • ನಿಯಂತ್ರಿತ ಮಂಡಿಗಳ ಹೊರತಾಗಿ ಖಾಸಗಿ ವ್ಯಾಪಾರಸ್ಥರು ಟ್ರೇಡಿಂಗ್ ಗೆ ನೋಂದಣಿ ಮಾಡಲು ರಾಜ್ಯಗಳಿಗೆ ಅವಕಾಶ ನೀಡಲು ಕಾನೂನಿಗೆ ತಿದ್ದುಪಡಿ 
  • ಖಾಸಗಿ ಸಂಸ್ಥೆಗಳು ನೋಂದಣಿ ಮಾಡಿಕೊಂಡಿರುವ ಮಂಡಿಗಳಲ್ಲಿ ಎಪಿಎಂಸಿಗಳಿಗೆ ಅನ್ವಯವಾಗುವಂತೆಯೇ  ಸೆಸ್/ಶುಲ್ಕಗಳನ್ನು ರಾಜ್ಯ ಸರ್ಕಾರ ವಿಧಿಸಲಿದೆ.
  • ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಸಿವಿಲ್ ನ್ಯಾಯಾಗಳ ಮೊರೆ ಹೋಗಲು ರೈತರಿಗೆ ಆಯ್ಕೆ ನೀಡುವುದಕ್ಕಾಗಿ ಕಾನೂನು ತಿದ್ದುಪಡಿ
  • ಗುತ್ತಿಗೆ ನೀಡಿರುವ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಿರುವ ಯಾವುದೇ ಕಟ್ಟಡ ನಿರ್ಮಾಣದ ಮೇಲೆ ಸಾಲ ಸಿಗದಂತೆ ಹಾಗೂ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ ಗುತ್ತಿಗೆಗೆ ಪಡೆದಿದ್ದವರು ಆ ಕಟ್ಟಡವನ್ನು ಅತಿಕ್ರಮಣ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ರೈತರಿಗೆ ಭರವಸೆ

ಭೋಗ್ಯ, ಅಡಮಾನ ಅಥವಾ ಕೃಷಿ ಭೂಮಿ ಮಾರಾಟಕ್ಕೆ ನಿರ್ಬಂಧ ವಿಧಿಸುವುದು, ಸ್ಪಾನ್ಸರ್ ಗಳು ಕೃಷಿ ಭೂಮಿ ಮೇಲಿನ ಒಡೆತನ ಕಸಿದುಕೊಳ್ಳುವುದಕ್ಕೆ ಅಥವಾ ಭೂಮಿಯ ಸ್ವರೂಪ ಬದಲಾವಣೆ ಮಾಡುವುದಕ್ಕೆ ನಿರ್ಬಂಧ ವಿಧಿಸುವುದೇ ಮೊದಲಾದ ಭರವಸೆಗಳನ್ನು ಕೇಂದ್ರ ಸರ್ಕಾರ ರೈತರಿಗೆ ಕಳಿಸಿಕೊಟ್ಟಿರುವ ತನ್ನ ಪ್ರಸ್ತಾವನೆಗಳ ಅಂಶಗಳಲ್ಲಿ ಸೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com