'ದೆಹಲಿ ಚಲೋ' ರೈತರ ಪ್ರತಿಭಟನೆ 14ನೇ ದಿನಕ್ಕೆ: 6ನೇ ಸುತ್ತಿನ ಮಾತುಕತೆ ರದ್ದುಪಡಿಸಿದ ಕೇಂದ್ರ ಸರ್ಕಾರ

ಸುಮಾರು 40 ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಸಿಂಘು ಗಡಿಭಾಗದಲ್ಲಿ ನಿನ್ನೆ ಪ್ರತಿಭಟನೆಯಲ್ಲಿ ಸೇರಿದ್ದ ರೈತರು
ಸಿಂಘು ಗಡಿಭಾಗದಲ್ಲಿ ನಿನ್ನೆ ಪ್ರತಿಭಟನೆಯಲ್ಲಿ ಸೇರಿದ್ದ ರೈತರು

ನವದೆಹಲಿ: ಸುಮಾರು 40 ರೈತ ಸಂಘಟನೆಗಳೊಂದಿಗೆ ಬುಧವಾರ ನಡೆಸಬೇಕಿದ್ದ 6ನೇ ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ನಿನ್ನೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ ರೈತ ಮುಖಂಡರು ಮಾತುಕತೆಯಲ್ಲಿ ಭಾಗಿಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಇಂದು ಕೇಂದ್ರ ಸರ್ಕಾರ ಮಾತುಕತೆ ರದ್ದುಪಡಿಸಿದೆ.

ಇಂದು ರೈತ ಮುಖಂಡರೊಂದಿಗೆ ನಡೆಯಬೇಕಿದ್ದ 6ನೇ ಸುತ್ತಿನ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ವಕ್ತಾರರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಿನ್ನೆಯ ಮಾತುಕತೆಯಲ್ಲಿ ನಡೆದಂತೆ ಕೇಂದ್ರ ಸರ್ಕಾರ ವಿಧೇಯಕಕ್ಕೆ ತಿದ್ದುಪಡಿ ಮಾಡಿ ಲಿಖಿತ ಪ್ರಸ್ತಾವನೆಯನ್ನು ರೈತ ಮುಖಂಡರಿಗೆ ಕಳುಹಿಸಿದೆಯೇ, ಇಲ್ಲವೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ನಿನ್ನೆ ಗೃಹ ಸಚಿವ ಅಮಿತ್ ಶಾ ಅಖಿಲ ಭಾರತ ಕಿಸಾನ್ ಸಭಾದ ಹನ್ನನ್ ಮೊಲ್ಲ್ಪಾ, ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕ್ಟೈಟ್ ಅವರೊಂದಿಗೆ ನಡೆಸಿದ ಸಭೆ ಯಾವುದೇ ಸಂಧಾನಕ್ಕೆ ಬರಲು ಸಾಧ್ಯವಾಗದೆ ವಿಫಲವಾಗಿದೆ.

ಸಭೆಯಲ್ಲಿ ಅಮಿತ್ ಶಾ ಅವರು ಮೂರೂ ವಿಧೇಯಕಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಅದಕ್ಕೆ ರೈತ ಸಂಘಟನೆ ಪ್ರತಿನಿಧಿಗಳು ಒಪ್ಪಲಿಲ್ಲ. 

ಇನ್ನೊಂದೆಡೆ ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿ-ಹರ್ಯಾಣದ ಸಿಂಘು ಗಡಿಭಾಗದಲ್ಲಿ ಎಲ್ಲಾ ರೈತ ಸಂಘಟನೆಗಳ ಪ್ರತಿನಿಧಿಗಳು ಸೇರಿ ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ. ರೈತರು ಇಂದು ಕೂಡ ತಮ್ಮ ಪ್ರತಿಭಟನೆ ಮುಂದುವರಿಸಿದ್ದು 14ನೇ ದಿನಕ್ಕೆ ಕಾಲಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com