ಪಶ್ಚಿಮ ಬಂಗಾಳ 'ಗೂಂಡಾ ರಾಜ್ಯ'ವಾಗಿ ಮಾರ್ಪಟ್ಟಿದೆ: ಬೆಂಗಾವಲು ದಾಳಿ ಬಳಿಕ ಜೆ.ಪಿ.ನಡ್ಡಾ
ನಮ್ಮ ಬೆಂಗಾವಲು ಮೇಲೆ ದಾಳಿ ನಡೆಸಿರುವುದು ಆಘಾತಕಾರಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಅಸಹಿಷ್ಣುತೆಯಿಂದ ಕೂಡಿದ ಗೂಂಡಾ ರಾಜ್ಯವಾಗಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
Published: 10th December 2020 05:21 PM | Last Updated: 10th December 2020 05:21 PM | A+A A-

ಜೆಪಿ ನಡ್ಡಾ
ಡೈಮಂಡ್ ಹಾರ್ಬರ್: ನಮ್ಮ ಬೆಂಗಾವಲು ಮೇಲೆ ದಾಳಿ ನಡೆಸಿರುವುದು ಆಘಾತಕಾರಿಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಅಸಹಿಷ್ಣುತೆಯಿಂದ ಕೂಡಿದ ಗೂಂಡಾ ರಾಜ್ಯವಾಗಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
ಇಂದು ಡೈಮಂಡ್ ಹಾರ್ಬರ್ ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ ಅವರು, ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಗೂಂಡಾ ರಾಜ್ ಮೇಲುಗೈ ಸಾಧಿಸಿದೆ ಎಂದು ಆರೋಪಿಸಿದರು.
ನಾನು ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ನನಗೆ ಯಾವುದೇ ಗಾಯವಾಗಿಲ್ಲ. ಆದರೆ ಬೆಂಗಾವಲಿನಲ್ಲಿದ್ದ ಇತರರ ಮೇಲೆ ದಾಳಿ ಮಾಡಲಾಗಿದೆ. ಬಿಜೆಪಿಯ ಹಿರಿಯ ಮುಖಂಡರಿಗೆ ಈ ರೀತಿಯಾದರೆ, ಪಕ್ಷದ ಸಾಮಾನ್ಯ ಕಾರ್ಯಕರ್ತರ ದುಃಸ್ಥಿತಿಯನ್ನು ಸುಲಭವಾಗಿ ಊಹಿಸಬಹುದು ಎಂದರು.
ಮಾ ದುರ್ಗಿಯ ಅನುಗ್ರಹದಿಂದಾಗಿ ನಾನು ಇಲ್ಲಿಗೆ ಸುರಕ್ಷಿತವಾಗಿ ತಲುಪಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಎಷ್ಟು ಕಷ್ಟ ಎಂಬುದು ನನಗೆ ಅರ್ಥವಾಗುತ್ತದೆ ಎಂದರು. ಅಲ್ಲದೆ ನಾವು ಈ ಗೂಂಡಾ ರಾಜ್ ವಿರುದ್ಧ ಗೆಲುವು ಸಾಧಿಸುತ್ತೇವೆ ಮತ್ತು ಟಿಎಂಸಿ ಸರ್ಕಾರದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ ಎಂದರು.
ಇಂದು ಬೆಳಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಶೇಕ್ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರ ಡೈಮಂಡ್ ಹಾರ್ಬರ್ ಗೆ ತೆರಳುತ್ತಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಅವರ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಡ್ಡಾ ಹಾಗೂ ಇತರೆ ಬಿಜೆಪಿ ನಾಯಕರು ತೆರಳುತ್ತಿದ್ದ ವಾಹನಗಳ ಮೇಲೆ ಕಲ್ಲು ಹಾಗೂ ಸಾಫ್ಟ್ ಡ್ರಿಕ್ಸ್ ಬಾಟಲ್ ಗಳನ್ನು ಎಸೆಯಲಾಗಿದೆ. ನಡ್ಡಾ ಅವರ ಕಾರು ಬುಲೆಟ್ ಪ್ರೂಫ್ ವಾಹನವಾಗಿದ್ದರಿಂದ ಅವರು ಸುರಕ್ಷಿತವಾಗಿದ್ದಾರೆ. ಆದರೆ ಬಿಜೆಪಿ ನಾಯಕರಾದ ಕೈಲಾಶ್ ವಿಜಯವರ್ಗಿಯಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿಯಲ್ಲಿ ಕನಿಷ್ಠ ಸುಮಾರು 15 ವಾಹನಗಳು ಜಖಂಗೊಂಡಿವೆ.