ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನ ಮಾಯ, ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್!

ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ವಶದಲ್ಲಿದ್ದ ಬರೊಬ್ಬರಿ 103 ಕೆಜಿ ಚಿನ್ನ ಕಳವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.
ಚಿನ್ನ (ಸಂಗ್ರಹ ಚಿತ್ರ)
ಚಿನ್ನ (ಸಂಗ್ರಹ ಚಿತ್ರ)

ಚೆನ್ನೈ; ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ವಶದಲ್ಲಿದ್ದ ಬರೊಬ್ಬರಿ 103 ಕೆಜಿ ಚಿನ್ನ ಕಳವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.

ಮೂಲಗಳ ಪ್ರಕಾರ 2012 ರಲ್ಲಿ ಚೆನ್ನೈನ ಸುರಾನ ಕಾರ್ಪೊರೇಷನ್ ಲಿಮಿಟೆಡ್ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಶೋಧ ಕಾರ್ಯದಲ್ಲಿ 400 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಆ 400 ಕೆ.ಜಿ ಪೈಕಿ 100 ಕೆ.ಜಿ ತೂಕದ ಚಿನ್ನದಗಟ್ಟಿ ಹಾಗೂ ಆಭರಣಗಳು  ನಾಪತ್ತೆಯಾಗಿದೆ. ಇದರ ಮೌಲ್ಯವೇ ಸುಮಾರು 45 ಕೋಟಿ ರೂ.ವನ್ನು ದಾಟುತ್ತದೆ ಎಂದು ಅಂದಾಜಿಸಲಾಗಿದೆ. 

ಈ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಪಿಎನ್ ಪ್ರಕಾಶ್ ಅವರು, ಸಿಬಿ-ಸಿಐಡಿಗೆ ತನಿಖೆಯ ಜವಾಬ್ದಾರಿ ವಹಿಸಿದೆ. ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದ್ದು, ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ  ನೀಡುವಂತೆ ಸೂಚಿಸಿದೆ. 

ಮುಖಭಂಗ; ಸ್ಥಳೀಯ ಸಂಸ್ಥೆಗಳಿಂದ ತನಿಖೆ ಬೇಡ ಸಿಬಿಐ ಮನವಿ
ಬಂಗಾರವನ್ನ ವಶಕ್ಕೆ ಪಡೆದಿದ್ದ ಸಿಬಿಐ ವಿರುದ್ಧ ಕಳ್ಳತನದ ಆರೋಪದಡಿ ಪ್ರಕರಣ ಏಕೆ ದಾಖಲಿಸಬಾರದೆಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ, ದೇಶದ ಉನ್ನತ ತನಿಖಾ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ವಿರುದ್ಧ ಸ್ಥಳೀಯ ಸಂಸ್ಥೆಗಳಿಂದ ತನಿಖೆಯಾದರೆ  ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದು ಸಿಬಿಐ ಮನವಿ ಮಾಡಿತ್ತು. ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮದ್ರಾಸ್ ಹೈಕೋರ್ಟ್ ಸಿಬಿಐಗೆ ಕೊಂಬಿದೆಯೇ? ಕಾನೂನಿನಲ್ಲಿ ಈ ರೀತಿಯ ವಿನಾಯಿತಿಗೆ ಅವಕಾಶವಿಲ್ಲ. ಇದೊಂದು ಅಗ್ನಿಪರೀಕ್ಷೆ. ಕಾನೂನು ಎಲ್ಲರಿಗೂ  ಒಂದೇ ಎಂದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com