ಪ್ರತಿಭಟನೆಯ ಜೊತೆಗೆ ರೈತರಿಂದ ಉಪವಾಸ ಸತ್ಯಾಗ್ರಹ: ಪ್ರತಿಯಾಗಿ ಬಿಜೆಪಿಯಿಂದ ಜಾಗೃತಿ ಅಭಿಯಾನ

ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ಮಸೂದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ರೈತರ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ. 
ನಿನ್ನೆ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರು
ನಿನ್ನೆ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರು

ಲಕ್ನೊ: ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ಮಸೂದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ರೈತರ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ. 

ಈ ಕಿಸಾನ್ ಸಮ್ಮೇಳನ ಇಂದು ಆರಂಭವಾಗಲಿದ್ದು ಡಿಸೆಂಬರ್ 18ರವರೆಗೆ ಮುಂದುವರಿಯಲಿದೆ ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಕಿಸಾನ್ ಸಮ್ಮೇಳನವನ್ನು ಉದ್ದೇಶಿಸಿ ಅಯೋಧ್ಯೆ, ಬಸ್ತಿಗಳಲ್ಲಿ ಮಾತನಾಡಲಿದ್ದು, ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ರೈತರ ಸಭೆಯನ್ನು ಗೊಂಡಾದಲ್ಲಿ ಇದೇ 15ರಂದು ಉದ್ದೇಶಿಸಿ ಮಾತನಾಡಲಿದ್ದಾರೆ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತೊಂದು ಕಿಸಾನ್ ಸಮ್ಮೇಳನವನ್ನು ವಾರಣಾಸಿಯಲ್ಲಿ ಇದೇ 15ರಂದು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲ ತಿಳಿಸಿದ್ದಾರೆ.

ಕೇಸರಿ ಪಕ್ಷದ ಕಿಸಾನ್ ಸಮ್ಮೇಳನಕ್ಕೆ ಪ್ರತಿಯಾಗಿ ಇನ್ನೊಂದೆಡೆ, ಎಲ್ಲಾ ರೈತ ಸಂಘಟನೆಗಳ ಮುಖ್ಯಸ್ಥರು ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೈತ ಮುಖಂಡ ಗುರ್ನಮ್ ಸಿಂಗ್ ಚಡುನಿ ದೆಹಲಿಯಲ್ಲಿ ತಿಳಿಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ನಿನ್ನೆ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಡುನಿ ತಿಳಿಸಿದ್ದಾರೆ.

ಅಲ್ಲದೆ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು, ರೈತರು ಪ್ರಧಾನ ಮಂತ್ರಿ ಮೋದಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಪ್ರತಿಭಟನೆ ಇನ್ನೊಂದೆಡೆ ಮುಂದುವರಿಯಲಿದೆ ಎಂದರು.

ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ರೈತರ ಪ್ರತಿಭಟನೆಗೆ ಸಮಾಜವಾದಿ ಪಕ್ಷದ ಬೆಂಬಲವಿದೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಕಳೆದ ಡಿಸೆಂಬರ್ 7ರಂದು ಸಮಾಜವಾದಿ ಪಕ್ಷ ಕಿಸಾನ್ ಯಾತ್ರೆಯನ್ನು ಆರಂಭಿಸಿತ್ತು. ಇಂದು ಪಕ್ಷದ ಕಾರ್ಯಕರ್ತರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಿದ್ದಾರೆ ಎಂದರು.

 ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಪ್ರಧಾನಕ್ಕಿಂತ ಮೊದಲು ಕೃಷಿ ಶಬ್ದ ಬರುತ್ತದೆ ಎಂದು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com