ಲಡಾಕ್ ನಲ್ಲಿ ಅಪ್ರಚೋದಿತ ದಾಳಿ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿಕೊಡುತ್ತಿದೆ: ರಾಜನಾಥ್ ಸಿಂಗ್ 

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಸೇನಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ನಮ್ಮ ಸೇನೆಗೆ ಈಗ ಪರೀಕ್ಷೆಯ ಕಾಲ, ಗಡಿಯಲ್ಲಿ ನಿಂತು ಹೋರಾಟ ಮಾಡುವಾಗ ನಮ್ಮ ಸೈನ್ಯ ಅತ್ಯಂತ ಹೆಚ್ಚಿನ ಅನುಕರಣೀಯ ಧೈರ್ಯ, ಸಾಹಸವನ್ನು ತೋರಿಸಿದ್ದಾರೆ. ಚೀನಾ ಸೇನಾಪಡೆಯ ಎದುರು ಭಾರತೀಯ ಸೇನೆ ಧೈರ್ಯದಿಂದ ಹೋರಾಟ ಮಾಡಿದ್ದು ಹಿಂದೆ ಹೋಗುವಂತೆ ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಎಫ್ಐಸಿಸಿಐಯ 93ನೇ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಹಿಮಾಲಯ ಕಣಿವೆಯಲ್ಲಿ ಅಪ್ರಚೋದಿತ ದಾಳಿ ನಡೆಯುತ್ತಿರುವುದು ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನಮಗೆ ತಿಳಿಸಿಕೊಡುತ್ತದೆ. ಗಡಿ ದೇಶದೊಂದಿಗಿನ ಈಗಿನ ಒಪ್ಪಂದಗಳು ಹೇಗೆ ಸವಾಲಾಗಿವೆ, ಹಿಮಾಲಯ ಕಣಿವೆಯಲ್ಲಿ ಮಾತ್ರವಲ್ಲದೆ ಇಂಡೊ-ಫೆಸಿಫಿಕ್ ತೀರದುದ್ದಕ್ಕೂ ಅಧಿಕಾರ ಹೊಂದಲು ಗಡಿ ರಾಷ್ಟ್ರ ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಈ ವರ್ಷ ಚೀನಾ ಗಡಿಭಾಗದಲ್ಲಿ ನಮ್ಮ ಸೈನ್ಯ ಮೆರೆದ ಸಾಹಸವನ್ನು ಮುಂದಿನ ಜನಾಂಗ ನೋಡಿ ಖುಷಿ ಪಡುತ್ತದೆ. ಗಡಿ ವಾಸ್ತವ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾದಾಗಲೆಲ್ಲ ಭಾರತ ಮತ್ತು ಚೀನಾದ ಮಿಲಿಟರಿ ಶಕ್ತಿಯನ್ನು ಹೋಲಿಕೆ ಮಾಡಲಾಗುತ್ತದೆ ಎಂದರು.

ಗಡಿ ರೇಖೆ ಉಲ್ಲಂಘಿಸಿ ಬಂದು ಭಯೋತ್ಪಾದಕ ಕೃತ್ಯವೆಸಗುವ ಪರಿಸ್ಥಿತಿಗಳಿಗೆ ನಾವು ಭಾರತೀಯರು ಬಲಿಯಾಗಿದ್ದೇವೆ. ಆದರೂ ಯಾರ ಬೆಂಬಲವೂ ಇಲ್ಲದೆ ಏಕಾಂಗಿಯಾಗಿ ಹೋರಾಡಿ ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದೇವೆ, ಭಯೋತ್ಪಾದನೆಯನ್ನು ಪೋಷಿಸಿ, ಬೆಳೆಸುತ್ತಿರುವುದು ಪಾಕಿಸ್ತಾನ ಎಂದು ಇಂದು ಇಡೀ ಜಗತ್ತಿಗೆ ಅರ್ಥವಾಗಿದೆ ಎಂದರು. 

ಹಾಗೆಯೇ ಯಾವುದೇ ವೈರಸ್ ನಮ್ಮ ಸೈನಿಕರನ್ನು ಅವರ ದೇಶಸೇವೆ, ಕರ್ತವ್ಯಗಳಿಂದ ವಿಮುಕ್ತಿ, ವಿಚಲಿತ ಮಾಡಲು ಸಾಧ್ಯವಿಲ್ಲ, ಇಡೀ ವಿಶ್ವ ಕೊರೋನಾ ವೈರಸ್ ನ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ ನಮ್ಮ ಸೈನಿಕರು ಗಡಿಯನ್ನು ಸಮರ್ಥವಾಗಿ ಕಾಪಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. 

ಕೃಷಿ ಸುಧಾರಣೆ ಮಸೂದೆಗಳನ್ನು ಹಿಂಪಡೆಯುವುದಿಲ್ಲ: ಕೇಂದ್ರ ಸರ್ಕಾರ ತಂದಿರುವ ಸುಧಾರಿತ ನೂತನ ಮೂರು ಕೃಷಿ ಮಸೂದೆಗಳು ರೈತರ ಸುಧಾರಣೆಗಾಗಿಯೇ ಇವೆ, ಇದರಿಂದ ರೈತರ ಬದುಕು ಖಂಡಿತಾ ಸುಧಾರಿಸುತ್ತದೆ, ಹೀಗಾಗಿ ಅದನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯಿಲ್ಲ, ಆದರೂ ರೈತ ಬಾಂಧವರ ಸಮಸ್ಯೆಗಳನ್ನು, ಅವರ ಬೇಡಿಕೆಗಳನ್ನು ಸರ್ಕಾರ ಖಂಡಿತಾ ಆಲಿಸಲಿದೆ. ಸರ್ಕಾರದಿಂದ ಸಾಧ್ಯವಾದ ಎಲ್ಲಾ ಭರವಸೆ, ಆಶ್ವಾಸನೆಗಳನ್ನು ನೀಡುತ್ತೇವೆ. ನಮ್ಮ ಸರ್ಕಾರ ಯಾವಾಗಲೂ ರೈತರೊಂದಿಗೆ ಮುಕ್ತ ಚರ್ಚೆ, ಮಾತುಕತೆ ನಡೆಸಲು ಸಿದ್ದವಿದೆ, ರೈತರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದರು.

ಕೊರೋನಾ ವೈರಸ್ ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಎದುರಿಸಲು ಮತ್ತು ತಪ್ಪಿಸಲು ಸಾಧ್ಯವಾದ ಒಂದು ಕ್ಷೇತ್ರವೆಂದರೆ ಅದು ಕೃಷಿ ವಲಯ ಎಂದು ಕೂಡ ರಾಜನಾಥ್ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com