ಕೋವಿಡ್-19 ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳ ಅಗ್ನಿ ಸುರಕ್ಷತಾ ಪರಿಶೋಧನೆ ನಡೆಸಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಆದೇಶ

ದೇಶಾದ್ಯಂತ ಕೋವಿಡ್-19 ಚಿಕಿತ್ಸೆಗೆ ನಿರ್ದಿಷ್ಟವಾಗಿರುವ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡದಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ಅಗ್ನಿ ಸುರಕ್ಷತಾ ಪರಿಶೋಧನೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ದೇಶಾದ್ಯಂತ ಕೋವಿಡ್-19 ಚಿಕಿತ್ಸೆಗೆ ನಿರ್ದಿಷ್ಟವಾಗಿರುವ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡದಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳು ಅಗ್ನಿ ಸುರಕ್ಷತಾ ಪರಿಶೋಧನೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ನಿಗದಿತ ಕೋವಿಡ್-19 ಆಸ್ಪತ್ರೆಗಳು ನಾಲ್ಕು ವಾರಗಳೊಳಗೆ ಅಗ್ನಿಶಾಮಕ ದಳದಿಂದ ಆಕ್ಷೇಪಣಾರಹಿತ ಪ್ರಮಾಣಪತ್ರವನ್ನು(ಎನ್ಒಸಿ) ಪಡೆದುಕೊಳ್ಳಬೇಕು, ಒಂದು ವೇಳೆ ವಿಫಲವಾದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಕೂಡ ಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ಆಸ್ಪತ್ರೆಗಳ ಅಗ್ನಿ ಸುರಕ್ಷತೆಯ ಬಗ್ಗೆ ಎನ್ಒಸಿ ಅವಧಿ ಮುಗಿದಿದ್ದರೆ ಅದನ್ನು ನಾಲ್ಕು ವಾರಗಳೊಳಗೆ ನವೀಕರಿಸಬೇಕಾಗುತ್ತದೆ ಎಂದು ಹೇಳಿದೆ.

ರಾಜಕೀಯ ರ್ಯಾಲಿಗಳಲ್ಲಿ ಮತ್ತು ಕೋವಿಡ್-19 ಶಿಷ್ಟಾಚಾರಗಳು ಸರಿಯಾಗಿ ಪಾಲನೆಯಾಗುತ್ತವೆಯೇ ಎಂದು ಚುನಾವಣಾ ಆಯೋಗ ತಪಾಸಣೆ ನಡೆಸಲಿದೆ ಎಂದು ನ್ಯಾಯಮೂರ್ತಿಗಳಾದ ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಶಾ ಅವರನ್ನು ಸಹ ಒಳಗೊಂಡ ನ್ಯಾಯಪೀಠ ಹೇಳಿದೆ. ಕೆಲ ತಿಂಗಳ ಹಿಂದೆ ಗುಜರಾತ್ ರಾಜ್ಯದ ರಾಜ್ ಕೋಟ್ ನಲ್ಲಿನ ಕೋವಿಡ್-19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಉಂಟಾಗಿ ಕೆಲವು ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡು ಇಂದು ಈ ಆದೇಶ ನೀಡಿದೆ.

ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್-19 ಶಿಷ್ಠಾಚಾರಗಳನ್ನು ಎಲ್ಲಾ ರಾಜ್ಯಗಳು ಪಾಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಆಸ್ಪತ್ರೆಗಳಲ್ಲಿ ಬೆಂಕಿ ಅವಘಡಗಳಂತಹ ಘಟನೆಗಳು ಪುನರಾವರ್ತಿಸದಂತೆ ರಾಜ್ಯ ಸರ್ಕಾರಗಳು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸಹ ಹೇಳಿದೆ.

ಕಳೆದ ಆರೇಳು ತಿಂಗಳಿನಿಂದ ಕೋವಿಡ್-19 ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ವೈದ್ಯರು, ಶುಶ್ರೂಷಕಿಯರಿಗೆ ಕರ್ತವ್ಯಕ್ಕೆ ವಿರಾಮ ನೀಡಲು ಅವಕಾಶ ಕೊಡಬೇಕು. ನಿರಂತರ ಕೆಲಸದಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೇಶಾದ್ಯಂತ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಅಗ್ನಿ ಸುರಕ್ಷತಾ ಮಾರ್ಗಸೂಚಿಗಳ ಅನುಷ್ಠಾನ ಮಾಡುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಮಾನದಂಡಗಳನ್ನು ಅನುಸರಿಸುವ ಬಗ್ಗೆ ಪ್ರತಿಕ್ರಿಯೆ ಕೋರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com